ಚಿತ್ರದುರ್ಗ: ಮೊಬೈಲ್ ಕೊಡಿಸಿದ ಕಾರಣಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ನಡೆದಿದೆ.
20 ವರ್ಷದ ಯಶವಂತ್ ಮೃತ ಯುವಕ. ಅ. 8ರಂದು ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಯಶವಂತ್ ಮೊಬೈಲ್ ಕಳೆದುಕೊಂಡಿದ್ದ. ತನ್ನ ಅಜ್ಜನಿಗೆ ಮೊಬೈಲ್ ಕೊಡಿಸುವಂತೆ ಪೀಡಿಸಿದ್ದು, ಅವರು ಈರುಳ್ಳಿ ಬೆಳೆ ಮಾರಾಟ ಮಾಡಿದ ನಂತರ ಮೊಬೈಲ್ ಕೊಡಿಸುವುದಾಗಿ ಹೇಳಿದ್ದಾರೆ.
ಆದರೂ ಹಠ ಬಿಡದ ಯಶವಂತ್ ಬುಧವಾರ ಬೆಳಗ್ಗೆ ಕ್ರಿಮಿನಾಶಕ ಸೇವಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. 17 ವರ್ಷಗಳ ಹಿಂದೆ ಯಶವಂತನ ತಂದೆ ಮೃತಪಟ್ಟಿದ್ದರು. ತಾಯಿ ಮತ್ತು ಅಜ್ಜನ ಜೊತೆಗೆ ಯಶವಂತ್ ವ್ಯವಸಾಯ ಮಾಡಿಕೊಂಡಿದ್ದ ಎನ್ನಲಾಗಿದೆ.