ಬೆಂಗಳೂರು: ಸ್ನೇಹಿತೆಗೆ ಗೊತ್ತಾಗದಂತೆ ಆಕೆಯ ಮೊಬೈಲ್ ನಲ್ಲಿ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡಿ ಆಕೆಯ ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂಜಯ್ ಕುಮಾರ್ ವಿರುದ್ಧ 27 ವರ್ಷದ ಸಂತ್ರಸ್ತೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಮಹಿಳೆ ಕೆಲಸ ಮಾಡಿಕೊಂಡಿದ್ದು, ಅದೇ ಕಂಪನಿಯಲ್ಲಿ ಹೆಲ್ಪರ್ ಆಗಿದ್ದ ವಿಷ್ಣು ಎಂಬಾತನ ಮೂಲಕ 2023ರಲ್ಲಿ ಆರೋಪಿ ಸಂಜಯ್ ಕುಮಾರ್ ಪರಿಚಯವಾಗಿತ್ತು. ಈ ಮೂವರು ಆತ್ಮೀಯರಾಗಿದ್ದರು.
ಈ ನಡುವೆ ಸಂತ್ರಸ್ತೆಯ ಮೊಬೈಲ್ ಪಡೆದುಕೊಂಡಿದ್ದ ಸಂಜಯ್ ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅದನ್ನು ಆಕೆಗೆ ತಿಳಿಯದಂತೆ ಮೊಬೈಲ್ ಸ್ಕ್ರೀನ್ ನಲ್ಲಿ ಕಾಣದ ಹಾಗೆ ಹೈಡ್ ಮಾಡಿದ್ದಾನೆ. ಸಂತ್ರಸ್ತೆ ಮನೆಯಲ್ಲಿದ್ದಾಗ ತುರ್ತಾಗಿ ಫೋನ್ ಬರಬಹುದೆಂದು ಬಾತ್ರೂಮ್ ಗೆ ತೆಗೆದುಕೊಂಡು ಹೋಗಿದ್ದು, ಆಕೆಗೆ ಗೊತ್ತಾಗದಂತೆ ಆ್ಯಪ್ ಮೂಲಕ ದೃಶ್ಯಗಳನ್ನು ಸೇವ್ ಮಾಡಿ ಇಟ್ಟುಕೊಂಡಿದ್ದ ಸಂಜಯ್ ಬ್ಲಾಕ್ ಮೇಲ್ ಮಾಡಿ ಹಣ ಪಡೆದುಕೊಂಡಿದ್ದ. ಸೆ. 7ರಂದು ಭೇಟಿಯ ನೆಪದಲ್ಲಿ ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಮತ್ತೆ ಬ್ಲಾಕ್ ಮೇಲ್ ಮಾಡಿದ್ದರಿಂದ ಸಂತ್ರಸ್ತೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.