ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮುಂದಿದ್ದಾರೆ. ದೊಡ್ಡವರಿಗಿಂತ ಚಿಕ್ಕವರೆ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ನಂತಹ ವಸ್ತುಗಳನ್ನು ಹೆಚ್ಚಾಗಿ ಬಳಸ್ತಿದ್ದಾರೆ. ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕುಳಿತು ಆಟದ ಜೊತೆಗೆ ಪಾಠವನ್ನು ಕೂಡ ಕಲಿಯುತ್ತಿದ್ದಾರೆ. ಈ ಟೆಕ್ನಾಲಜಿಯಿಂದ ಎಷ್ಟು ಉಪಯೋಗವಿದೆಯೋ ಅದ್ರ ದುಪ್ಪಟ್ಟು ನಷ್ಟವಿದೆ. ಮಕ್ಕಳ ಆರೋಗ್ಯದ ಮೇಲೆ ಈ ಟೆಕ್ನಾಲಜಿ ಸಾಕಷ್ಟು ಪರಿಣಾಮ ಬೀರುತ್ತಿದೆ.
ಅಧ್ಯಯನದ ಪ್ರಕಾರ ವಾರದಲ್ಲಿ 32 ಗಂಟೆಗಿಂತ ಹೆಚ್ಚು ಸಮಯ ಸ್ಕ್ರೀನ್ ನೋಡುವ ಮಕ್ಕಳು ಅನಾರೋಗ್ಯಕ್ಕೊಳಗಾಗ್ತಾರೆ. ಜೊತೆಗೆ ಕುಟುಂಬದ ಸಂಪ್ರದಾಯಗಳಿಂದ ದೂರ ಉಳಿಯುತ್ತಾರೆ.
ಲ್ಯಾಪ್ ಟಾಪ್ ಅಥವಾ ಟಿವಿಯನ್ನು ಗಂಟೆಗಟ್ಟಲೆ ನೋಡುವ ಮಕ್ಕಳ ಕಣ್ಣುಗಳು ಕಾಂತಿಯನ್ನು ಕಳೆದುಕೊಳ್ಳುತ್ತವೆ. ದೃಷ್ಠಿ ದೋಷದ ಸಮಸ್ಯೆಯಿಂದ ಬಳಲುತ್ತಾರೆ.
ಇನ್ನೊಂದು ಅಧ್ಯಯನದ ಪ್ರಕಾರ, ಮೂರರಿಂದ ನಾಲ್ಕನೇ ತರಗತಿ ಓದುವ ಮಕ್ಕಳಿಗಿಂತ ಚಿಕ್ಕ ವಯಸ್ಸಿನ ಮಕ್ಕಳು ಒಂದು ಗಂಟೆ ಲ್ಯಾಪ್ ಟಾಪ್, ಮೊಬೈಲ್, ಟಿವಿ ನೋಡುವುದರಿಂದ ಅವರ ಏಕಾಗ್ರತೆ ಮೇಲೆ ಪರಿಣಾಮವುಂಟಾಗುತ್ತದೆ.
ಸ್ಮಾರ್ಟ್ ಫೋನ್ ಬಳಕೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನ ದಿನಕ್ಕೂ ಅವರ ಆರೋಗ್ಯ ಕ್ಷೀಣಿಸುತ್ತದೆ.
ನಿರಂತರವಾಗಿ ಸ್ಕ್ರೀನ್ ನೋಡುವುದರಿಂದ ಮಕ್ಕಳ ಮನಸ್ಸು ಹಾಗೂ ಶರೀರದ ಮೇಲೆ ಋಣಾತ್ಮಕ ಪರಿಣಾಮವುಂಟಾಗುತ್ತದೆ.
ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಮಕ್ಕಳು ಕುಳಿತುಕೊಳ್ಳುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವುದಿಲ್ಲ. ಇದರಿಂದಾಗಿ ಬೊಜ್ಜು ಬರುತ್ತದೆ.