ಉತ್ಪಾದನಾ ದೋಷವುಳ್ಳ ಮೊಬೈಲ್ ಪೂರೈಕೆ ಮಾಡಿದ್ದಕ್ಕಾಗಿ ಗ್ರಾಹಕರಿಗೆ ಪರಿಹಾರ ನೀಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ.
ದೂರುದಾರರಾದ ಚೇತನ್ ತಾವು ಕೊಂಡ ಮೊಬೈಲ್ನಲ್ಲಿ ದೋಷವಿದ್ದು ರಿಪೇರಿ ಮಾಡದೇ ಸೇವಾ ನ್ಯೂನ್ಯತೆವೆಸಗಿದ ಎದುರುದಾರ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಹಾಗೂ ಮೊಬೈಲ್ ಕೇರ್ ಶಿವಮೊಗ್ಗ ಇವರ ವಿರುದ್ದ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡಲು ಸೂಚಿಸಿದೆ.
ದೂರುದಾರರಾದ ಚೇತನ್ ಇವರು ಎದುರುದಾರರಾದ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್ 1ನೇ ಎದುರುದಾರರು, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ 2ನೇ ಎದುರುದಾರರು ಮತ್ತು ಮೊಬೈಲ್ ಕೇರ್ ಶಿವಮೊಗ್ಗ, 3ನೇ ಎದುರುದಾರರು ಇವರ ವಿರುದ್ದ ದೂರನ್ನು ಸಲ್ಲಿಸಿ ತಾವು ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಇವರಿಂದ ಕೊಂಡ ಮೊಬೈಲ್ನಲ್ಲಿ ಖರೀದಿಸಿದ ದಿನಾಂಕದಿಂದಲೂ ದೋಷ ಕಂಡುಬಂದಿದ್ದು, ಹಲವಾರು ಬಾರಿ ಎದುರುದಾರರಲ್ಲಿ ರಿಪೇರಿ ಮಾಡಿಕೊಡಲು ವಿನಂತಿಸಿದ್ದು, ಎದುರುದಾರರು ಒಮ್ಮೆ ಮೊಬೈಲ್ ರಿಪೇರಿ ಮಾಡಿಕೊಟ್ಟಿದ್ದರು. ನಂತರವೂ ಮೊಬೈಲ್ನಲ್ಲಿ ದೋಷ ಕಂಡುಬಂದಿದ್ದು, ಎದುರುದಾರರಲ್ಲಿ ತೋರಿಸಿದಾಗ, ಎದುರುದಾರರು ಸ್ಪಂದಿಸದಿದ್ದಕ್ಕೆ ಮೊಬೈಲ್ನ್ನು ರಿಪೇರಿ ಮಾಡಿಕೊಡಲು ವಕೀಲರ ಮುಖಾಂತರ ಲೀಗಲ್ ನೋಟೀಸ್ ನೀಡಿದ್ದಾಗ್ಯೂ ದುರಸ್ತಿಪಡಿಸಲು ವಿಫಲರಾದ ಕಾರಣ ಈ ಆಯೋಗದ ಮುಂದೆ ಅರ್ಜಿ ಸಲ್ಲಿಸಿ ಮೊಬೈಲ್ನಲ್ಲಿ ತಯಾರಿಕಾ ದೋಷವಿರುವ ಕಾರಣ ಮೊಬೈಲ್ ಖರೀದಿಯ ಮೊತ್ತ ರೂ.40,800/-ಗಳನ್ನು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಆದ ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಹಾಗೂ ರೂ.2.000/-ಗಳ ವೆಚ್ಚಗಳನ್ನು ಎದುರುದಾರರು ನೀಡಲು ನಿರ್ದೇಶಿಸಬೇಕೆಂದು ವಿನಂತಿಸಿದ್ದರು.
ದೂರನ್ನು ದಾಖಲಿಸಿಕೊಂಡು ಆಯೋಗದಿಂದ ಎದುರುದಾರರಿಗೆ ನೋಟೀಸ್ನ್ನು ನೀಡಿದ್ದು, ಎದುರುದಾರರು ನೋಟೀಸ್ ಪಡೆದು ಹಾಜರಾಗದ ಕಾರಣ ಎದುರುದಾರರನ್ನು ಏಕ-ಪಕ್ಷೀಯವೆಂದು (ಎಕ್ಸ್-ಪಾರ್ಟೆ) ತೀರ್ಮಾನಿಸಲಾಗಿರುತ್ತದೆ ಹಾಗೂ ಸದರಿ ದೂರಿನ ವಿಚಾರಣೆಯನ್ನು ಮಾಡಿ, ದೂರಿನ ಅಂಶಗಳು, ದೂರುದಾರರ ಪರ ವಕೀಲರ ವಾದವನ್ನು ಆಲಿಸಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು ಫಿರ್ಯಾದಿದಾರರು 2ನೇ ಎದುರುದಾರರಿಂದ ಮೊಬೈಲ್ ಖರೀದಿಸಿರುವುದು ಫಿರ್ಯಾದಿದಾರರು ಸಲ್ಲಿಸಿರುವ ರಸೀದಿಯಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್ನ್ನು ರಿಪೇರಿಗಾಗಿ 3ನೇ ಎದುರುದಾರರ ಬಳಿ ನೀಡಿರುವುದು 3ನೇ ಎದುರುದಾರರು ನೀಡಿರುವ ಸರ್ವಿಸ್ ಚಲನ್ನಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್ ರಿಪೇರಿ ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದರೂ ಎದುರುದಾರರು ಸರಿಯಾದ ರೀತಿಯಲ್ಲಿ ಮೊಬೈಲ್ ರಿಪೇರಿ ಮಾಡಿಕೊಡದ ಕಾರಣ ಮೊಬೈಲ್ ಹಣ ವಾಪಸ್ ನೀಡಲು ಕೋರಿರುವುದು ವಕೀಲರು ಎದುರುದಾರರಿಗೆ ಕಳುಹಿಸಿರುವ ಲೀಗಲ್ ನೋಟೀಸ್ನಲ್ಲಿ ಖಾತರಿಯಾಗಿರುತ್ತದೆ.
ದೂರುದಾರರು ಮಾಡಿರುವ ಆಪಾದನೆಗಳಿಗೆ ಮತ್ತು ಸಲ್ಲಿಸಿರುವ ದಾಖಲೆಗಳಿಗೆ 1 ಮತ್ತು 2ನೇ ಎದುರುದಾರರು ಸ್ಥಳೀಯವಾಗಿ ಶಿವಮೊಗ್ಗದಲ್ಲೇ ಇದ್ದರೂ ಸಹ ಹಾಜರಾಗಿ ದೂರುದಾರರು ಮಾಡಿರುವ ಆಪಾದನೆಗಳು ಸುಳ್ಳೆಂದಾಗಲಿ ಅಥವಾ ತಮ್ಮ ವಿರುದ್ಧ ದೂರುದಾರರು ಮಾಡಿರುವ ಆಪಾದನೆಗಳನ್ನು ಅಲ್ಲಗೆಳೆಯುವಂತಹ ಯಾವುದೇ ದಾಖಲೆಗಳನ್ನು ಸಹ ಮಂಡಿಸಿರುವುದಿಲ್ಲವೆಂಬ ಅಂಶಗಳನ್ನು ಪರಿಗಣಿಸಿದ ಆಯೋಗವು ಅರ್ಜಿದಾರರು ಖರೀದಿಸಿದ ಮೊಬೈಲ್ ಉತ್ಪಾದನಾ ದೋಷದಿಂದ ಕೂಡಿದ್ದು ಎದುರುದಾರರು ಸದರಿ ಮೊಬೈಲ್ನ್ನು ರಿಪೇರಿ ಮಾಡಿಕೊಡಲು ವಿಫಲರಾಗಿದ್ದು, ಎದುರುದಾರರ ಸೇವಾ ನ್ಯೂನ್ಯತೆಯಾಗಿರುತ್ತದೆಂದು ಪರಿಗಣಿಸಿ ಅರ್ಜಿದಾರರು ಎದುರುದಾರರಿಂದ ಮೊಬೈಲ್ ಖರೀದಿಸಿದ ಮೊತ್ತ ರೂ.34,576/- (ಜಿ.ಎಸ್.ಟಿ. ರೂ.6.223.73 ಹೊರತುಪಡಿಸಿ)ಗಳನ್ನು ಶೇ.9 ಬಡ್ಡಿಯೊಂದಿಗೆ ದಿ: 01/01/2024 ರಿಂದ ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರಿಂದ ಅರ್ಜಿದಾರರಿಗೆ ಉಂಟಾದ ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ರೂ.15,000/-ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ.10,000/-ಗಳನ್ನು ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ. ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನು ಒಳಗೊಂಡ ಪೀಠವು ಅಕ್ಟೋಬರ್ 9 ರಂದು ಆದೇಶಿಸಿದೆ.