ತಮಿಳುನಾಡಿನ ಕೂನೂರಿನ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನ ವಿಡಿಯೋ ಸೆರೆ ಹಿಡಿದ ವ್ಯಕ್ತಿಯ ಮೊಬೈಲ್ ಫೋನ್ ಸಂಗ್ರಹಿಸಿದ ತಮಿಳುನಾಡಿನ ಕೊಯಮತ್ತೂರು ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಿದ್ದಾರೆ.
ಕಳೆದ ಬುಧವಾರ ಸಂಭವಿಸಿದ ಈ ದುರಂತದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದರು. ಈ ದುರಂತದಲ್ಲಿ ರಾವತ್ ಪತ್ನಿ ಮಧುಲಿಕಾ ರಾವತ್ ಸಹ ದುರಂತ ಅಂತ್ಯ ಕಂಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಂಬಂಧ ಫೋನ್ ಅನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋನ್‌ನ ಮಾಲೀಕರಾದ ಜೋ ಕೊಯಮತ್ತೂರಿನಲ್ಲಿ ಮದುವೆ ಛಾಯಾಗ್ರಾಹಕರಾಗಿದ್ದು, ಘಟನೆ ನಡೆದ ವೇಳೆ ನೀಲಗಿರಿ ಜಿಲ್ಲೆಯಲ್ಲಿ ಸ್ನೇಹಿತರೊಂದಿಗೆ ಕಟ್ಟೇರಿ ಪ್ರದೇಶದಲ್ಲಿದ್ದರು. ಹೆಲಿಕಾಪ್ಟರ್ ಹಾರುತ್ತಿದ್ದ ವೇಳೆ ಕುತೂಹಲದಿಂದ ಜೋ ಈ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಹೆಲಿಕಾಪ್ಟರ್ ಪತನಗೊಂಡ ಕೆಲವೇ ಕ್ಷಣಗಳ ಮುಂಚೆ ಈ ವಿಡಿಯೋ ಸೆರೆ ಹಿಡಿಯಲಾಗಿದೆ.
ಕಾಡು ಪ್ರಾಣಿಗಳ ನಿರಂತರ ಓಡಾಟದ ಕಾರಣದಿಂದ ನಿಷೇಧಿತವಾದ ಪ್ರದೇಶದಲ್ಲಿ ಜೋ ಹಾಗು ಆತನ ಸ್ನೇಹಿತರು ಏನು ಮಾಡುತ್ತಿದ್ದರೂ ಎಂದೂ ಸಹ ಪೊಲೀಸರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈ ಫುಟೇಜ್‌ನಲ್ಲಿ ಭಾರತೀಯ ವಾಯುಪಡೆಯ ಮಿ-17ವಿ5 ಹೆಲಿಕಾಪ್ಟರ್ ಮಂಜಿನಲ್ಲಿ ಮರೆಯಾಗುತ್ತಿರುವುದನ್ನು ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ, ’ಮೃತಪಟ್ಟವರ ಘನತೆಗೆ ಕುಂದುಂಟಾಗುವ ಯಾವುದೇ ವದಂತಿಗಳನ್ನು ಹಬ್ಬಿಸದಂತೆ’ ವಾಯು ಪಡೆ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿತ್ತು. ಅಪಘಾತದ ತನಿಖೆ ನಡೆಸಲು ವಾಯುಪಡೆ ಮೂರೂ ಸೇವೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದೆ.