ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಲ್ ಟ್ರೈನಿನ ಮಹಿಳಾ ಬೋಗಿಯಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಲ್ವಾ ನಿಲ್ದಾಣದಲ್ಲಿ ಚಲಿಸುತ್ತಿದ್ದ ಸಿಎಸ್‌ಎಮ್‌ಟಿ-ಕಲ್ಯಾಣ್ ಲೋಕಲ್ ಟ್ರೈನ್ನಿನಲ್ಲಿ ಈ ಘಟನೆ ಸಂಭವಿಸಿದೆ.
ರಾತ್ರಿ 8.12ರ ಸುಮಾರಿಗೆ ಸಂಭವಿಸಿದ ಈ ಸ್ಫೋಟದಿಂದಾಗಿ ಪ್ರಯಾಣಿಕರು ಭಯಭೀತರಾಗಿ ಚಲ್ಲಾಪಿಲ್ಲಿಯಾದರು. ಕೂಡಲೇ ಎಚ್ಚೆತ್ತ ರೈಲ್ವೆ ಸಿಬ್ಬಂದಿ ಅಗ್ನಿಶಾಮಕದಳದ ಸಹಾಯದಿಂದ ಬೆಂಕಿಯನ್ನು ನಿಯಂತ್ರಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಯಾಸಿನ್ ತಡ್ವಿ ತಿಳಿಸಿದ್ದಾರೆ.
ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಹೊಗೆ ಕಾಣಿಸಿಕೊಂಡಿತು, ಇದರಿಂದಾಗಿ ಪ್ರಯಾಣಿಕರು ಗಾಬರಿಯಿಂದ ಬೋಗಿಯಿಂದ ಹೊರಗೆ ಓಡಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಮೊಬೈಲ್ ಬ್ಯಾಟರಿ ವೈಫಲ್ಯ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ರೈಲು ಸಂಚಾರಕ್ಕೆ ಯಾವುದೇ ಅಡಚಣೆಯುಂಟಾಗಲಿಲ್ಲ.