ಆನ್ಲೈನ್ ತರಗತಿಯಲ್ಲಿ ಭಾಗಿಯಾಗಿದ್ದ 15 ವರ್ಷದ ಬಾಲಕನೊಬ್ಬನ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಚಂಡುಕಿಯಾ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ಎಂಟನೇ ತರಗತಿ ವಿದ್ಯಾರ್ಥಿಯಾದ ರಾಮ್‌ಪ್ರಕಾಶ್ ಭದೌರಿಯಾ ಆನ್ಲೈನ್ ಕ್ಲಾಸ್‌ನಲ್ಲಿ ಭಾಗಿಯಾಗಿದ್ದ ವೇಳೆ ಮೊಬೈಲ್ ಹೀಗೆ ಸ್ಫೋಟಗೊಂಡಿದೆ. ಬಾಲಕನ ದವಡೆಗೆ ಗಾಯಗಳಾಗಿದ್ದು, ಸ್ಫೋಟಗೊಂಡ ವೇಳೆ ಮನೆಯಲ್ಲಿ ಆತ ಒಬ್ಬನೇ ಇದ್ದ ಎಂದು ತಿಳಿದು ಬಂದಿದೆ.
ಸ್ಫೋಟದ ಸದ್ದಿಗೆ ಗಾಬರಿಗೊಂಡ ಅಕ್ಕ-ಪಕ್ಕದ ಮನೆಯವರು ಬಾಲಕನನ್ನು ರಕ್ಷಿಸಿದ್ದಾರೆ. ಮೊದಲಿಗೆ ಸತ್ನಾ ಜಿಲ್ಲಾಸ್ಪತ್ರೆಗೆ ಬಾಲಕನನ್ನು ಕರೆದೊಯ್ದಿದ್ದು, ಅಲ್ಲಿಂದ ಜಬಾಲ್ಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ಆತನನ್ನು ಕರೆದೊಯ್ಯಲಾಗಿದೆ.