
ಬೆಂಗಳೂರು: ಪ್ರಿಯತಮೆಯೇ ಸಿನಿಮೀಯ ಶೈಲಿಯಲ್ಲಿ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಬಂಧಿತಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳ್ಳತನ ಮಾಡಿಸಿದ್ದ ಟೆಕ್ಕಿ ಶ್ರುತಿ ಸೇರಿ ನಾಲ್ವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆ. 20ರಂದು ವಂಶಿಕೃಷ್ಣ ರೆಡ್ಡಿ ಎಂಬಾತ ಪ್ರಿಯತಮೆ ಶ್ರುತಿ ಭೇಟಿ ಮಾಡಲು ತೆರಳಿದ್ದ. ಆಕೆಯನ್ನು ಭೇಟಿಯಾಗಿ, ದ್ವಿಚಕ್ರ ವಾಹನದಲ್ಲಿ ಇಬ್ಬರೂ ಬರುವಾಗ ಸ್ವಿಫ್ಟ್ ಕಾರ್ ನಲ್ಲಿ ಬಂದ ಕೆಲವರು ಡಿಕ್ಕಿ ಹೊಡೆಸಿದ್ದಾರೆ. ಜಗಳವಾಡಿ ಆತನ ಬಳಿ ಇದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಶ್ರುತಿಯ ಮೊಬೈಲ್ ಕೂಡ ಕಸಿದುಕೊಂಡು ಪರಾರಿಯಾಗಿದ್ದಾರೆ. ಪೊಲೀಸರಿಗೆ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಗಲಿ ಎಂದು ಶ್ರುತಿ ಡ್ರಾಮಾ ಮಾಡಿದ್ದಾಳೆ. ಆದರೆ ವಂಶಿಕೃಷ್ಣ ಬೆಳ್ಳಂದೂರು ಠಾಣೆ ಪೊಲೀಸರಿಗೆ ಕಾರಿನ ನಂಬರ್ ಸಹಿತ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಶ್ರುತಿಯೇ ಬೈಕ್ ಗೆ ಡಿಕ್ಕಿ ಹೊಡೆಸಿ ಮೊಬೈಲ್ ಕಸಿದುಕೊಳ್ಳಲು ಹೇಳಿದ್ದಳು ಎನ್ನುವುದು ಗೊತ್ತಾಗಿದೆ. ವಂಶಿಕೃಷ್ಣನಿಂದ ದೂರವಾಗಲು ಪ್ರಯತ್ನಿಸಿದ ಶ್ರುತಿ ಆತನ ಮೊಬೈಲ್ ನಲ್ಲಿದ್ದ ಇಬ್ಬರ ಫೋಟೋ, ವಿಡಿಯೋ ಡಿಲೀಟ್ ಮಾಡಲು ಇಂತಹ ಕೃತ್ಯ ಎಸಗಿದ್ದಾಳೆ. ಒಂದೂವರೆ ಲಕ್ಷ ರೂ. ಕೊಟ್ಟು ಮೊಬೈಲ್ ದೋಚುವ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಪೊಲೀಸರು ಶ್ರುತಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.