ಕಲಬುರ್ಗಿ: ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಮೊಬೈಲ್ ಬೆಳಕಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆ ನಡೆದಿದೆ.
ಆಸ್ಪತ್ರೆಯಲ್ಲಿ ಕರೆಂಟ್ ಕೈಕೊಟ್ಟ ಪರಿಣಾಮ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ನರ್ಸ್ ಹೆರಿಗೆ ಮಾಡಿಸಿದ್ದಾರೆ. ವೈದ್ಯರು ಇರಲಿಲ್ಲವಾದ್ದರಿಂದ ನರ್ಸ್ ಅವರೇ ಹೆರಿಗೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ಕೊಲ್ಲೂರು ಗ್ರಾಮದ ಸಿದ್ದಮ್ಮ ಅವರಿಗೆ ಮಂಗಳವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ರಾತ್ರಿ 10.30 ರ ಸುಮಾರಿಗೆ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ.
ಈ ವೇಳೆ ವೈದ್ಯರು ಇರಲಿಲ್ಲ. ನರ್ಸ್ ಅವರೇ ಹೆರಿಗೆ ಮಾಡಿಸಲು ಮುಂದಾಗಿದ್ದು, ರಾತ್ರಿ 11 ಗಂಟೆಗೆ ವಿದ್ಯುತ್ ಸ್ಥಗಿತಗೊಂಡಿದೆ. ಆರೋಗ್ಯ ಕೇಂದ್ರದಲ್ಲಿರುವ ಸೋಲಾರ್ ವ್ಯವಸ್ಥೆ ಕೂಡ ಸರಿ ಇರಲಿಲ್ಲ. ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಿಲ್ಲ. 4 -5 ಮೊಬೈಲ್ ಟಾರ್ಚ್ ಬೆಳಕಿನಲ್ಲಿ ನರ್ಸ್ ಅವರೇ ಹೆರಿಗೆ ಮಾಡಿಸಿದ್ದು ಸಿದ್ದಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆಗಾಗಲೇ ಬೆಳಗಿನ ಜಾವ 4 ಗಂಟೆಯಾಗಿದ್ದರೂ ವಿದ್ಯುತ್ ಬಂದಿರಲಿಲ್ಲ ಎನ್ನಲಾಗಿದೆ.