ಬೆಂಗಳೂರು: ಇಂದು ಮೊಬೈಲ್ ಫೋನ್ ಗೆ ಬಂದ ಸೈರನ್ ಸೌಂಡ್, ಎಮರ್ಜನ್ಸಿ ಅಲರ್ಟ್ ಸಂದೇಶಕ್ಕೆ ಕೆಲವರು ಬೆಚ್ಚಿ ಬಿದ್ದಿದ್ದಾರೆ. ಕಚೇರಿ ಕೆಲಸ, ಮನೆ ಕೆಲಸ ಹೀಗೆ ಅವರವರ ಕೆಲಸಗಳಲ್ಲಿ ಮಗ್ನರಾಗಿದ್ದ ಜನತೆ ಏಕಾಏಕಿ ತುರ್ತು ಎಚ್ಚರಿಕೆ ಸಂದೇಶ ಎಂದು ಮೊಬೈಲ್ ಹೊಡೆದುಕೊಳ್ಳಲು ಆರಂಭಿಸುತ್ತಿದಂತೆ ಎಲ್ಲಿ ಏನಾಗುತ್ತಿದೆ ಎಂಬುದೆ ಅರ್ಥವಾಗದೇ ಶಾಕ್ ಆದ ಸಂದರ್ಭ….. ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ಬಂದ ಈ ತುರ್ತು ಎಚ್ಚರಿಕೆ ಕೆಲ ಹೊತ್ತು ಉಸಿರು ಬಿಗಿ ಹಿಡಿದುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಈ ರೀತಿ ಅಲರ್ಟ್ ನೀಡಲಾಗುತ್ತದೆ ಎಂದು ಮೊಬೈಲ್ ಗಳಿಗೆ ಸಂದೇಶ ಬಂದಿತ್ತಾದರೂ ಇದರ ಮಾಹಿತಿ ಇರದವರು ಏನಾಯಿತೋ ಎಂದು ಒಂದು ಕ್ಷಣ ಗಾಬರಿಯಾಗಿದ್ದಾರೆ.
ಇಂದು ಬೆಳಿಗ್ಗೆ 11:35ರ ಸುಮಾರಿಗೆ ಆಂಡ್ರೈಡ್ ಮತ್ತು ಐಫೋನ್ ಗಳಿಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದ್ದು, ಎಮರ್ಜನ್ಸಿ ಅಲರ್ಟ್ ಎಂದು ಬೀಪ್ ಸೌಂಡ್ ನೊಂದಿಗೆ ಧ್ವನಿಯೊಂದು ಬರುತ್ತಿದ್ದಂತೆ ಗೊಂದಲಕ್ಕೊಳಗಾಗಿದ್ದಾರೆ. ಈ ಸಂದೇಶ ಕೆಲ ಹೊತ್ತಿನ ಅಂತರದಲ್ಲೇ ಇಂಗ್ಲೀಷ್ ಹಾಗೂ ಕನ್ನಡದಲ್ಲಿಯೂ ಬಂದಿದೆ.
ಧಿಡೀರ್ ಎಂದು ಬಂದ ಎಮರ್ಜನ್ಸಿ ಅಲರ್ಟ್ ಸಂದೇಶಕ್ಕೆ ಒಬ್ಬೊಬ್ಬರಿಗೆ ಒಂದೊಂದು ಅನುಭವ. ಕೆಲವರಿಗೆ ಮೊಬೈಲ್ ಬ್ಲಾಸ್ಟ್ ಆಗಿ ಬಿಡುತ್ತಾ ಎಂಬ ಭಯ. ಲ್ಯಾಪ್ ಟಾಪ್ ನಲ್ಲಿ ಕೆಲಸದಲ್ಲಿ ನಿರತರಾದವರಿಗೆ ಕಂಪ್ಯೂಟರ್ ಗೆ ಏನಾಗಿಬಿಡ್ತಪ್ಪಾ ಎಂಬ ಆತಂಕ….ಸಾವರಿಸಿಕೊಂಡು ಮೊಬೈಲ್ ಚಕ್ ಮಾಡಿ ಮೆಸೇಜ್ ನೋಡಿದಾಗ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಪರೀಕ್ಷಾರ್ಥ ಸಂದೇಶ ಎಂಬುದು ಗೊತ್ತಾಗಿದೆ. ಅಬ್ಬಾ…! ಎಂದು ನಿಟ್ಟುಸಿರು ಬಿಟ್ಟು ಸುಧಾರಿಸಿಕೊಂಡಿದ್ದಾರೆ ಜನ.
ಈ ಎಚ್ಚರಿಕೆಯ ಸಂದೇಶ ತುರ್ತು ಎಚ್ಚರಿಕೆಯ ವ್ಯವಸ್ಥೆಯ ಪರೀಕ್ಷೆಯ ಒಂದು ಭಾಗ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಡೆಸಿದ ಟ್ರಯಲ್ ಇದು. ತುರ್ತು ಸಂದರ್ಭದಗಳಲ್ಲಿ ಎಚ್ಚರಿಕೆ ವ್ಯವಸ್ಥೆ ಎಂಬುದು ಪರಿಣಾಮಕಾರಿಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಮತ್ತು ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ನಡೆಸಿದ ಪರೀಕ್ಷೆಯಾಗಿದೆ. ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ 11:30ರಿಂದ 11:44ರ ನಡುವೆ ಈ ಸಂದೇಶ ದೇಶಾದ್ಯಂತ ಕೋಟ್ಯಂತರ ಜನರ ಮೊಬೈಲ್ ಗಳಿಗೆ ಕಳುಹಿಸಲಾಗಿದೆ. ಈ ಕುರಿತು ಕಳೆದ ಕೆಲ ದಿನಗಳಿಂದ ಮೊಬೈಲ್ ಗಳಿಗೆ ನಿರಂತರವಾಗಿ ಸಂದೇಶ ಕಳಿಸಲಾಗಿತ್ತು. ಇದರ ಅರಿವಿರದವರು ಗಾಬರಿಗೊಂಡಿದ್ದು, ಮೊದಲೇ ಮಾಹಿತಿ ಇದ್ದವರು ಆರಾಮಾಗಿ ಇದ್ದರು.