
ಚಿಕ್ಕಬಳ್ಳಾಪುರ: ಶಿಯೋಮಿ ಕಂಪನಿಗೆ ಸೇರಿದ ಮೂರು ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ಕಳವು ಮಾಡಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಣೆ ಮಾಡುವಾಗ ಕಳ್ಳತನ ನಡೆಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲಹಳ್ಳಿ ಸಮೀಪ ಘಟನೆ ನಡೆದಿದೆ. ಕಂಟೈನರ್ ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಿಸಲಾಗುತ್ತಿತ್ತು. ಪೆರೇಸಂದ್ರ ಪೋಲೀಸರು ಸದ್ಯ ಖಾಲಿ ಕಂಟೈನರ್ ವಶಕ್ಕೆ ಪಡೆದುಕೊಂಡಿದ್ದಾರೆ.
ನವೆಂಬರ್ 22ರಂದು ಕಂಟೈನರ್ ನಲ್ಲಿ ಶಿಯೋಮಿ ಕಂಪನಿಗೆ ಸೇರಿದ ಮೂರು ಕೋಟಿ ರೂ. ಮೌಲ್ಯದ ಮೊಬೈಲ್ ಗಳನ್ನು ದೆಹಲಿಯಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಆದರೆ, ಕಂಟೈನರ್ ನಿಗದಿತ ಸಮಯಕ್ಕೆ ಬೆಂಗಳೂರಿಗೆ ತಲುಪಿರಲಿಲ್ಲ. ಅನುಮಾನಗೊಂಡ ಕಂಪನಿಯ ಅಧಿಕಾರಿಗಳು ಜಿಪಿಎಸ್ ಪರಿಶೀಲಿಸಿದಾಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲಹಳ್ಳಿ ಸಮೀಪ ಕಂಟೈನರ್ ನಿಂತಿರುವುದು ಗೊತ್ತಾಗಿದೆ. ಪರಿಶೀಲನೆ ನಡೆಸಿದಾಗ 3 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಗಳು ಕಾಣೆಯಾಗಿದ್ದು, ಚಾಲಕ ರಾಹುಲ್ ಎಂಬಾತ ಕೂಡ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೆರೇಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.