ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಸಾಕು ಓದು, ಆಟ, ಪಾಠ, ಊಟ ಎಲ್ಲವನ್ನೂ ಮರೆತು ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ವಿದ್ಯಾಭ್ಯಾಸದ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಮೂರು ಹೊತ್ತು ಮೊಬೈಲ್ ನಲ್ಲೇ ಕಾಲಕಳೆಯುತ್ತಿದ್ದ ಮಕ್ಕಳ ನಡೆಗೆ ಬೇಸತ್ತ ಪೋಷಕರ ಸಂಘವೊಂದು ಮೊಬೈಲ್ ಗಳನ್ನು ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿದ್ಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಮಕ್ಕಳ ಕೈಲಿದ್ದ ಮೊಬೈಲ್ ಕಿತ್ತು ಪುಡಿ ಪುಡಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯಾಬ್ಯಾಸದಲ್ಲಿ ಹಿಂದೆ ಇದ್ದ ಹಾಗೂ ಕಲಿಕೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಶಾಲೆಯೊಂದರ ಪೋಷಕರ ಸಂಘ ವಿದ್ಯಾರ್ಥಿಗಳಿಂದಲೇ ಮೊಬೈಲ್ ಪಡೆದು ಅದನ್ನು ಒಡೆದು ಹಾಕಿದೆ. ಕೆಲ ವಿದ್ಯಾರ್ಥಿಗಳು ಪೋಷಕರ ಸಂಘದ ಆದೇಶದ ಮೇರೆಗೆ ಕಣ್ಣೀರಿಡುತ್ತಲೇ ತಮ್ಮ ಮೊಬೈಲ್ ಗಳನ್ನು ತಾವೇ ಕಲ್ಲಿನಿಂದ ಜಜ್ಜಿ ಜಜ್ಜಿ ಒಡೆದು ಹಾಕಿದ್ದಾರೆ.
ಪೋಷಕರ ಸಂಘದ ಕೆಲಸಕ್ಕೆ ಹಲವು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ತುಂಬಾ ಅನ್ಯಾಯ ಎಂದಿದ್ದಾರೆ. ಮತ್ತೆ ಹಲವರು ಮೊಬೈಲ್ ಗೀಳಿನಿಂದ ಮಕ್ಕಳನ್ನು ಸಂಪೂರ್ಣವಾಗಿ ಹೊರತರಲು ಹಾಗೂ ಓದಿನ ಬಗ್ಗೆ ಮಕ್ಕಳು ಗಮನಹರಿಸುವಂತೆ ಮಾಡಲು ಇದು ಉತ್ತಮ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.