ಬೆಂಗಳೂರು: ಸಹೋದ್ಯೋಗಿಗಳ ಸ್ನಾನದ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದ ನರ್ಸ್ ಬಂಧಿಸಲಾಗಿದೆ. ಆರೋಪಿ ನರ್ಸ್ ಅಶ್ವಿನಿ ಹಾಸ್ಟೆಲ್ ನಲ್ಲಿ ಸಹೋದ್ಯೋಗಿಗಳ ಸ್ನಾನದ ದೃಶ್ಯಗಳನ್ನು ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದಳು.
ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಆಸ್ಪತ್ರೆ ಹಾಸ್ಟೆಲ್ ನಲ್ಲಿ ಘಟನೆ ನಡೆದಿದೆ. ಡಿಸೆಂಬರ್ 5 ರಂದು ಸಂಜೆ ನರ್ಸ್ ಒಬ್ಬರು ಸ್ನಾನ ಮಾಡಲು ಹೋದಾಗ ಮೊಬೈಲ್ ಇಟ್ಟಿರುವುದು ಗೊತ್ತಾಗಿದೆ. ಗಾಬರಿಯಾದ ಅವರು ಪರಿಶೀಲನೆ ನಡೆಸಿದಾಗ ಅದರಲ್ಲಿ ವಿಡಿಯೋ ರೆಕಾರ್ಡ್ ಆನ್ ಆಗಿ ದೃಶ್ಯಗಳು ಸೆರೆಯಾಗಿರುವುದು ಕಂಡುಬಂದಿದೆ. ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಮೊಬೈಲ್ ತೆಗೆದುಕೊಂಡು ಹಾಸ್ಟೆಲ್ ಮೇಲ್ವಿಚಾರಕಿಗೆ ಒಪ್ಪಿಸಿದ್ದಾರೆ.
ಅದರಲ್ಲಿ ಅನೇಕ ನರ್ಸ್ ಗಳ ವಿಡಿಯೋಗಳು ಇರುವುದು ಕಂಡುಬಂದಿದ್ದು, ಆರೋಪಿ ನರ್ಸ್ ಅಶ್ವಿನಿಯನ್ನು ವಿಚಾರಿಸಿದಾಗ ದೃಶ್ಯಗಳನ್ನು ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ವೈಟ್ ಫೀಲ್ಡ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.