ಸಿಡ್ನಿ: ವಿದೇಶದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾಳುಗೆಡವುದು, ಭಾರತೀಯರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಕಳವಳ ಮೂಡಿಸಿದೆ. ಇದೀಗ, ಶುಕ್ರವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪು ಭಾರತೀಯ ಮೂಲದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಸ್ವಪ್ನಿಲ್ ಸಿಂಗ್ ಎಂದು ಗುರುತಿಸಲಾಗಿದೆ. ಆದರೆ, ಜೀವಭಯದಿಂದ ತನ್ನ ಮೂಲ ಹೆಸರನ್ನು ಮರೆಮಾಡಿದ್ದಾನೆ. ಪಶ್ಚಿಮ ಸಿಡ್ನಿಯ ಉಪನಗರವಾದ ವೆಸ್ಟ್‌ಮೀಡ್‌ನಲ್ಲಿ ದಾಳಿಗೊಳಗಾಗಿದ್ದಾನೆ. ಸ್ವಪ್ನಿಲ್ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪೊಂದು ಕಬ್ಬಿಣದ ರಾಡ್‌ಗಳಿಂದ ದಾಳಿ ಮಾಡಿದೆ. ಆತನ ಮುಖದ ಎಡಭಾಗಕ್ಕೆ ರಾಡ್‌ನಿಂದ ಹೊಡೆದಿದ್ದಾರೆ.
ಕೆಲಸಕ್ಕೆ ಹೊರಡಲು ಸ್ವಪ್ನಿಲ್ ಕಾರಿನಲ್ಲಿ ಕುಳಿತಿದ್ದರಂತೆ. ಈ ವೇಳೆ ಇದ್ದಕ್ಕಿದ್ದಂತೆ ನಾಲ್ಕೈದು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪು ಈತನ ಕಾರಿನ ಸುತ್ತ ಸೇರಿದ್ದಾರೆ. ಕೂಡಲೇ ಕಾರಿನ ಎಡಬದಿಯ ಬಾಗಿಲು ತೆರೆದು ಸ್ವಪ್ನಿಲ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಖಲಿಸ್ತಾನಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ.
ನಾನು ಚಾಲಕನಾಗಿ ಕೆಲಸ ಮಾಡುತ್ತೇನೆ. ನಾನು ವಾಸಿಸುವ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿ ನನ್ನ ವಾಹನವನ್ನು ನಿಲ್ಲಿಸಲಾಗಿದೆ. ನಾನು ಡ್ರೈವಿಂಗ್ ಸೀಟಿನಲ್ಲಿ ಕುಳಿತ ತಕ್ಷಣ ಈ ಖಲಿಸ್ತಾನ್ ಬೆಂಬಲಿಗರು ಎಲ್ಲಿಂದಲೋ ಬಂದರು. ಅವರಲ್ಲಿ ಒಬ್ಬರು ನನ್ನ ವಾಹನದ ಎಡಭಾಗದ ಬಾಗಿಲನ್ನು ತೆರೆದರು ಮತ್ತು ನನ್ನ ಎಡಗಣ್ಣಿನ ಕೆಳಗೆ ನನ್ನ ಕೆನ್ನೆಯ ಮೇಲೆ ಕಬ್ಬಿಣದ ರಾಡ್ ನಿಂದ ಹೊಡೆದರು. ಅವರಲ್ಲಿ ಇಬ್ಬರು ತಮ್ಮ ಫೋನ್‌ಗಳಲ್ಲಿ ದಾಳಿಯನ್ನು ರೆಕಾರ್ಡ್ ಮಾಡುತ್ತಿದ್ದರು. ನಾಲ್ಕೈದು ಮಂದಿ ಸೇರಿ ತನಗೆ ಥಳಿಸಿದ್ರು ಎಂದು ಸ್ವಪ್ನಿಲ್ ಹೇಳಿಕೊಂಡಿದ್ದಾನೆ.
ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ತಲೆ, ಕಾಲು ಮತ್ತು ತೋಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಸ್ವಪ್ನಿಲ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.