
ತುಮಕೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ಕೊಲೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸೋಮ, ಭರತ್, ಅಮಿತ್, ಗುಂಡ, ಯತೀಶ್ ಎಂಬುವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಅನಾಮಧೇಯ ಮೂಲಗಳಿಂದ ಸಿಕ್ಕ ಆಡಿಯೋದಲ್ಲಿ ರಾಜೇಂದ್ರ ಕೊಲೆಗೆ ಸುಫಾರಿ ಬಗ್ಗೆ ಮಾತುಕತೆ ನಡೆದಿದೆ. ಆರೋಪಿಗಳಾದ ಸೋಮ, ಭರತ್, ಅಮಿತ್, ಗುಂಡ ಹಾಗೂ ಯತೀಶ್ ಅವರು ವಿಧಾನಪರಿಷತ್ ಸದಸ್ಯ ರಾಜೇಂದ್ರ ಕೊಲೆಗೆ 70 ಲಕ್ಷಕ್ಕೆ ಡೀಲ್ ಕುದುರಿಸಿದ್ದು, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದರು ಎನ್ನಲಾಗಿದೆ.
ರಾಜೇಂದ್ರ ಅವರ ಮಗಳ ಜನ್ಮದಿನದಂದೇ ಹತ್ಯೆಗೆ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಸಮಯ ಸಂದರ್ಭದ ಕಾರಣದಿಂದ ಕೃತ್ಯವೆಸಗಲಾಗಿರಲಿಲ್ಲ. ಮುಂದೊಂದು ದಿನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದರು. ರಾಜೇಂದ್ರ ಹತ್ಯೆಗಾಗಿ ಹೊಸ ಕಾರ್, ಶಸ್ತ್ರಾಸ್ತ್ರ ಖರೀದಿಸಿದ್ದರು. ಮಧುಗಿರಿ, ತುಮಕೂರು, ಬೆಂಗಳೂರು, ಕಲಾಸಿಪಾಳ್ಯಗಳಲ್ಲಿ ಚಲನವಲನಗಳ ಬಗ್ಗೆ ಅಪ್ಡೇಟ್ ಮಾಡುತ್ತಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. ಉನ್ನತ ಮಟ್ಟದ ರಾಜಕಾರಣಿಗಳ ಕೈವಾಡವಿರುವುದಾಗಿ ರಾಜೇಂದ್ರ ಉಲ್ಲೇಖಿಸಿದ್ದು, ಸೂಕ್ತ ತನಿಖೆ ಮತ್ತು ರಕ್ಷಣೆಗಾಗಿ ಮನವಿ ಮಾಡಿದ್ದಾರೆ.