ವಿಧಾನಪರಿಷತ್ತಿಗೆ ಚುನಾವಣೆ ಜೂನ್ 3 ರಂದು ನಡೆಯುತ್ತಿದ್ದು, ಪ್ರತಿಪಕ್ಷ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಟಿಕೆಟ್ ಪಡೆಯಲು ಆಕಾಂಕ್ಷಿಗಳು ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಚುನಾವಣೆ ನಡೆಯಲಿರುವ 7 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಸುಲಭವಾಗಿ ಜಯ ಗಳಿಸಲು ಸಾಧ್ಯವಿದೆ.
ಮೂಲಗಳ ಪ್ರಕಾರ, ಲಿಂಗಾಯಿತ, ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಆಕಾಂಕ್ಷಿಗಳು ಟಿಕೆಟ್ ಗಾಗಿ ನಾಯಕರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ತಮ್ಮ ಆಪ್ತ ಮುದ್ದಹನುಮೇಗೌಡ ಅವರ ಪರ ಒಲವು ತೋರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಮತ್ತೋರ್ವ ಪ್ರಭಾವಿ ಒಕ್ಕಲಿಗ ನಾಯಕ ಮತ್ತು ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರೂ ಸಹ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಲಿಂಗಾಯಿತ ಕೋಟಾದಲ್ಲಿ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅಥವಾ ಬಳ್ಳಾರಿಯ ಪ್ರಭಾಕರ ಗೌಡ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ. ಈ ಹಿಂದೆ ಮೇಲ್ಮನೆಯ ಪ್ರತಿಪಕ್ಷದ ನಾಯಕರಾಗಿದ್ದ ಎಸ್.ಆರ್. ಪಾಟೀಲ್ ಅವರಿಗೆ ಡಿಕೆ ಸೋದರರು ಬೆಂಬಲವಾಗಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೇ, ಕ್ರಿಶ್ಚಿಯನ್ ಸಮುದಾಯದ ಆಕಾಂಕ್ಷಿಗಳು ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಸಮುದಾಯಕ್ಕೆ ಸೇರಿದ ನಿವೇದಿತ್ ಆಳ್ವಾ ಮತ್ತು ಐವಾನ್ ಡಿಸೋಜಾ ಅವರು ಆಕಾಂಕ್ಷಿಗಳಾಗಿದ್ದರೆ, ರಾಜ್ಯಸಭೆಯ ಮಾಜಿ ಸಭಾಪತಿ ರೆಹಮಾನ್ ಖಾನ್ ಅವರ ಮಗ ಮನ್ಸೂರ್ ಆಲಿ ಖಾನ್ ಸಹ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.