ಬೆಂಗಳೂರು: ಆರೋಗ್ಯದ ಹೆಸರಿನಲ್ಲಿ ಎಂಎಲ್ ಸಿಗಳು ಲಕ್ಷ ಲಕ್ಷ ಹಣವನ್ನು ಸರ್ಕಾರದಿಂದ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲೆಂದು ಹಣ ಕ್ಲೇಮ್ ಮಾಡಲು ವಿಧಾನ ಪರಿಷತ್ ಸದಸ್ಯರಿಗೆ ಅವಕಾಶವಿದೆ. ಆದರೆ ಕೇವಲ ಒಂದು ವರ್ಷದಲ್ಲಿ ಒಬ್ಬೊಬ್ಬ ಸದಸ್ಯರು ಲಕ್ಷ ಲಕ್ಷ ಹಣ ಕ್ಲೇಮ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯಲ್ಲಿ ಎಂಎಲ್ ಸಿಗಳ ಆರೋಗ್ಯಕ್ಕಾಗಿ ಪಡೆದಿರುವ ಹಣದ ಕುರುತು ಮಾಹಿತಿಯನ್ನು ಸಚಿವಾಲಯ ನೀಡಿದೆ.
2023 ಮೇ 1 ರಿಂದ 2024 ಜುಲೈ ತಿಂಗಳವರೆಗೆ ಒಟ್ಟು 71 ಎಂಎಲ್ ಸಿಗಳು ಆರೋಗ್ಯ ಸಮಸ್ಯೆ ಕಾರಣ ನೀಡಿ ಸರ್ಕಾರದಿಂದ ಭಾರಿ ಪ್ರಮಣದ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಂಎಲ್ ಸಿ ಭಾರತಿ ಶೆಟ್ಟಿ ಒಂದು ವರ್ಷದಲ್ಲಿ ಅತಿ ಹೆಚ್ಚು ಅಂದರೆ 40.70 ಲಕ್ಷ ರೂಪಾಯಿ ಹಣ ಕ್ಲೇಮ್ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಕೋಟ್ಯಾಧೀಶ ಸಿ.ಪಿ.ಯೋಗೇಶ್ವರ್ ಇದ್ದು 39.64 ಲಕ್ಷ ಹಣ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಇದ್ದು, ಇವರು ಆರೋಗ್ಯ ಕಾರಣಕ್ಕಾಗಿ 17.03 ಲಕ್ಷ ರೂಪಾಯಿ ಹಣವನ್ನು ಸರ್ಕಾರದಿಂದ ಪಡೆದಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಗೋವಿಂದರಾಜು ಒಂದು ವರ್ಷದಲ್ಲಿ ಆರೋಗ್ಯಕ್ಕಾಗಿ 7.26 ಲಕ್ಷ ರೂಪಾಯಿ ಸರ್ಕರದ ಹಣ ಖರ್ಚು ಮಾಡಿದ್ದಾರೆ. ಲಕ್ಷಣ ಸವದಿ 2,41574 ರೂಪಾಯಿ ಹಾಗೂ ಟಿ.ಎ.ಶರವಣ 2,14,770 ರೂ ಪಡೆದುಕೊಂಡಿದ್ದಾರೆ. ಒಟ್ಟು 71 ಪರಿಷತ್ ಸದಸ್ಯರು ಆರೋಗ್ಯ ಸಮಸ್ಯೆ ಚಿಕಿತ್ಸೆಗಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.