ಬೆಂಗಳೂರು: ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಉಪಚುನಾವಣೆಯಲ್ಲಿ ಶೇಕಡ 86.38ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೆ ಬಿಗಿ ಪೊಲೀಸ್ ಬಂದೋಬಸ್ ನಲ್ಲಿ ಮತದಾನ ನಡೆದಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿ ಯಾವುದೇ ಸಮಸ್ಯೆಗಳಿಲ್ಲದೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯ ಶಿಕ್ಷಕರು ಮತ ಚಲಾಯಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ, ಬಿಜೆಪಿ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಸೇರಿ 9 ಮಂದಿ ಕಣದಲ್ಲಿದ್ದಾರೆ. 7128 ಪುರುಷರು, 12,024 ಮಹಿಳೆಯರು ಸೇರಿ 19,152 ಮತದಾರರಿದ್ದು, 6500ಕ್ಕೂ ಹೆಚ್ಚು ಪುರುಷರು, 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿ 16,500ಕ್ಕೂ ಅಧಿಕ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಫೆಬ್ರವರಿ 20ರಂದು ಮತ ಎಣಿಕೆ ನಡೆಯಲಿದೆ.