
ಚಿಕ್ಕಮಗಳೂರು: ಮೂರು ವರ್ಷಗಳ ನಂತರ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ನಾಳೆ ನಡೆಯಲಿದೆ.
ಉಪ ಸಭಾಪತಿ ಪ್ರಾಣೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಅವರು ಪಡೆದ ಮತಗಳ ಎಣಿಕೆ ನಡೆಯಲಿದೆ. ಮೂರು ವರ್ಷಗಳ ನಂತರ ಮರುಮತ ಎಣಿಕೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನಾಳೆ ಚಿಕ್ಕಮಗಳೂರು ನಗರದ IDSG ಕಾಲೇಜಿನಲ್ಲಿ ಮರುಮತ ಎಣಿಕೆ ನಡೆಯಲಿದೆ.
ಜಿಲ್ಲಾಡಳಿತಕ್ಕೆ ಚುನಾವಣಾ ಆಯೋಗ ಮರು ಮತ ಎಣಿಕೆ ನಡೆಸುವಂತೆ ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಚುನಾವಣಾ ಆಯೋಗದಿಂದ ಸೂಚನೆ ನೀಡಲಾಗಿತ್ತು. 2021ರ ಡಿಸೆಂಬರ್ 10ರಂದು ವಿಧಾನ ಪರಿಷತ್ ಚುನಾವಣೆ ನಡೆದಿತ್ತು.
ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯತಿ ಸದಸ್ಯರು, ಪುರಸಭೆಯ ಚುನಾಯಿತ ಪ್ರತಿನಿಧಿಗಳು ಮತ ಚಲಾವಣೆ ಮಾಡಿದ್ದರು.
ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ 12 ನಾಮನಿರ್ದೇಶನ ಸದಸ್ಯರಿಂದಲೂ ಮತದಾನ ನಡೆದಿತ್ತು. 2410 ಮತಗಳಲ್ಲಿ 39 ಅಸಿಂಧುವಾಗಿದ್ದು, 2371 ಮತ ಸಿಂಧುವಾಗಿದ್ದವು. 6 ಮತಗಳ ಅಂತರದಿಂದ ಎಂ.ಕೆ. ಪ್ರಾಣೇಶ್ ಗೆಲುವು ಸಾಧಿಸಿದ್ದರು. ಎಂ.ಕೆ. ಪ್ರಾಣೇಶ್ 1118, ಕಾಂಗ್ರೆಸ್ ನ ಗಾಯತ್ರಿ 1182 ಮತ ಪಡೆದಿದ್ದರು. ಅಂದೇ ಮರು ಮತಎಣಿಕೆಗೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಮರು ಮತ ಎಣಿಕೆಗೆ ಅವಕಾಶ ನೀಡದೆ ಫಲಿತಾಂಶ ಘೋಷಿಸಲಾಗಿತ್ತು.
ಚುನಾವಣೆ ಫಲಿತಾಂಶ ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಾಳೆ ಮರುಮತ ಎಣಿಕೆ ನಡೆಯಲಿದೆ. ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮರುಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಮನಿರ್ದೇಶನ ಸದಸ್ಯರ ಮತಗಳನ್ನು ಹೊರಗಿಟ್ಟು ಮತ ಎಣಿಕೆ ಮಾಡಲಾಗುವುದು ನಾಮನಿರ್ದೇಶನ ಸದಸ್ಯರ 12 ಮತಗಳನ್ನು ಹೊರಗಿಟ್ಟು ಮರು ಮತಎಣಿಕೆ ಮಾಡಲಾಗುತ್ತದೆ.
ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಹೀಗಾಗಿ ಮರು ಮತ ಎಣಿಕೆ ತೀವ್ರ ಕುತೂಹಲ ಕೆರಳಿಸಿದೆ. ಮಾರ್ಚ್ 4 ರೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.