ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಪರಿಷತ್ತಿಗೆ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಂದ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಜೂನ್ 3 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.
ಭಾರತ ಚುನಾವಣಾ ಆಯೋಗದ ಆದೇಶದಂತೆ ಜೂನ್ 3 ರಂದು ಮತದಾನ ಮಾಡುವ ಸಮಯದಲ್ಲಿ ಮತದಾರರನ್ನು ಗುರುತಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ(ಎಪಿಕ್) ಯನ್ನು ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಎಪಿಕ್ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಪೂರಕ ದಾಖಲಾತಿಗಳಾದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ಸರ್ವೀಸ್ ಗುರುತಿನ ಚೀಟಿ(ನೌಕರರು ಕೇಂದ್ರ/ ರಾಜ್ಯ ಸರ್ಕಾರ ಪಬ್ಲಿಕ್ ಸೆಕ್ಟರ್, ಲೋಕಲ್ ಬಾಡಿಸ್ ಇತರ ಪ್ರೈವೆಟ್ ಇಂಡಸ್ಟ್ರೀಯಲ್ ಹೌಸಸ್). ಅಪಿಷಿಯಲ್ ಗುರುತಿನ ಚೀಟಿ (ಎಂಪಿ, ಎಂಎಲ್ಎ, ಎಂಎಲ್ಸಿ), ಶಿಕ್ಷಣ ಸಂಸ್ಥೆಯಿಂದ ನೀಡಿರುವ ಸರ್ವಿಸ್ ಗುರುತಿನ ಚೀಟಿ, ವಿಶ್ವವಿದ್ಯಾನಿಲಯದಿಂದ ನೀಡಿರುವ ಪ್ರಮಾಣ ಪತ್ರ, ವಿಶೇಷಚೇತನ ಗುರುತಿನ ಚೀಟಿ, ಯುನಿಕ್ ಡಿಸಾಬಿಲಿಟಿ ಗುರುತಿನ ಚೀಟಿ(ಯುಡಿಐಡಿ) ಈ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ ಎಂದು ಹೇಳಲಾಗಿದೆ.