ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡರನ್ನು ಉಚ್ಚಾಟಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಪಕ್ಷದ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರದ ಎಸ್.ಪಿ. ದಿನೇಶ್, ಬೆಂಗಳೂರು ಪದವಿಧರ ಕ್ಷೇತ್ರದ ಫರ್ನಾಂಡಿಸ್ ಲಾರೆನ್ಸ್, ನೈರುತ್ಯ ಶಿಕ್ಷಕರ ಕ್ಷೇತ್ರದ ಬಿ.ಆರ್. ನಂಜೇಶ್, ಆಗ್ನೇಯ ಶಿಕ್ಷಕರ ಕ್ಷೇತ್ರದ ಲೋಕೇಶ್ ತಾಳಿಕಟ್ಟೆ, ವಿನೋದ್ ಶಿವರಾಜ್ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.