ಬೆಂಗಳೂರು: ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.
ನವೆಂಬರ್ 16 ರಂದು ಅಧಿಸೂಚನೆ ಪ್ರಕಟಿಸಲಾಗುವುದು. ನವೆಂಬರ್ 23 ನಾಮಪತ್ರಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 10 ರಂದು ಮತದಾನ, ಡಿಸೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಹಾಲಿ ಬಿಜೆಪಿ 32, ಕಾಂಗ್ರೆಸ್ 29, ಜೆಡಿಎಸ್ 12 ಹಾಗೂ ಪಕ್ಷೇತರರು ಒಬ್ಬರು ಮತ್ತು ಸಭಾಪತಿ ಒಂದು ಸದಸ್ಯ ಬಲ ಇದೆ. ಈ ಬಾರಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಇಲ್ಲದೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸದಸ್ಯರು ಮತ ಚಲಾಯಿಸಲಿದ್ದಾರೆ.
ಪ್ರಮುಖರಾದ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಪ್ರತಿಪಕ್ಷದ ಮುಖ್ಯಸಚೇತಕ ನಾರಾಯಣಸ್ವಾಮಿ ಅವರ ಸದಸ್ಯತ್ವ ಅವಧಿ ಮುಕ್ತಾಯವಾಗಲಿದೆ. ವಿಧಾನಪರಿಷತ್ ನಲ್ಲಿ ಮೇಲುಗೈ ಸಾಧಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಗೆ 25 ಸದಸ್ಯ ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆ ಪ್ರಮುಖವಾಗಿದೆ.