
ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿದ್ದು, ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಅವಕಾಶ ಮಾಡಿಕೊಟ್ಟಿತ್ತು. ಒಳಗೊಳಗೆ ಅಸಮಾಧಾನವಿದ್ದರೂ ಸಹ ಪ್ರತಾಪ್ ಸಿಂಹ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದರು.
ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ತಮಗೆ ಅವಕಾಶ ಸಿಗಬಹುದು ಎಂದು ಇದಕ್ಕಾಗಿ ಪ್ರಯತ್ನ ನಡೆಸಿದ್ದ ಪ್ರತಾಪ್ ಸಿಂಹ ಅವರಿಗೆ ಇಲ್ಲಿಯೂ ನಿರಾಸೆಯಾಗಿದೆ. ವಿಧಾನ ಪರಿಷತ್ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಈಗಾಗಲೇ ಪ್ರಕಟಿಸಿದೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪ್ರತಾಪ್ ಸಿಂಹ, ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ರಘುಪತಿ ಭಟ್ ಅವರಿಗೆ ವಿಧಾನ ಪರಿಷತ್ ಪದವೀಧರರ ಕ್ಷೇತ್ರದ ಟಿಕೆಟ್ ನೀಡದ್ದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ ಎಂಎಲ್ಎ ಟಿಕೆಟ್ಟೂ ಸಿಗಲಿಲ್ಲ. MLC ಟಿಕಟ್ಟನ್ನೂ ನೀಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಚಾಟನೆಗೆ ಒಳಗಾಗಿ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ’ ಎಂದು ಹೇಳಿದ್ದಾರೆ.
