ಬೆಂಗಳೂರು: ಶಾಸಕರ ಹೆಸರಲ್ಲಿ ನಕಲಿ ಸಹಿ, ಲೆಟರ್ ಹೆಡ್ ಸೃಷ್ಟಿಸಿ ವಿಧಾನಸೌಧದಲ್ಲಿ ಕೆಲಸ ಕೊಡಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಸ್ವಾಮಿ (35) ಹಾಗೂ ಅಂಜನ್ ಕುಮಾರ್ (25) ಬಂಧಿತ ಆರೋಪಿಗಳು. ಸ್ವಾಮಿ ವಿಧಾನಸೌಧದಲ್ಲಿ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ಬಿಟ್ಟು ರಾಜಕಾರಣಿಗಳ ಜೊತೆ ಓಡನಾಟ ಬೆಳೆಸಿಕೊಂಡಿದ್ದ. ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಮಾಡಿ ವಿಧಾನಸೌಧ ಸಚಿವಾಲಯಕ್ಕೆ ಪತ್ರ ಬರೆದು ಪತ್ನಿ ವಿನುತಾಳಿಗೆ ಶಾಸಕರ ಆಪ್ತ ಸಹಾಯಕ ಹುದ್ದೆ ಕೊಡಿಸಿದ್ದನು.
ನಕಲಿ ಲೆಟರ್ ಹೆಡ್ ನಂಬಿದ ವಿಧಾನಸೌಧ ಸಚಿವಾಲಯದ ಸಿಬ್ಬಂದಿಗಳು ವಿನುತಾಳಿಗೆ 2023ರ ಮೇನಲ್ಲಿ ಕೆಲಸ ನೀಡಿದ್ದರು. ಬಳಿಕ ವಿನುತಾ ಕೆಲಸಕ್ಕೆ ಬಾರದೇ ತಿಂಗಳಿಗೆ 30 ಸಾವಿರ ಸಂಬಳ ಪಡೆದಿದ್ದಾಳೆ. ವಿಚಾರಿಸಿದಾಗ ಗರ್ಭಿಣಿಯಾಗಿರುವುದರಿಂದ ಕೆಲಸದಿಂದ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಳು. ಅನುಮಾನಗೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನೊಂದೆಡೆ ಶಾಸಕ ರಘು ಹೆಸರಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತ ಇನ್ನೋರ್ವನಿಗೆ ಕೆಲಸ ಕೊಡಿಸಿದ್ದ. ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು ಇದೀಗ ಸ್ವಾಮಿ ಹಾಗೂ ಅಂಜನ್ ಕುಮಾರ್ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿ ಪತ್ನಿ ವಿನುತಾಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.