ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮುನಿಸಿಕೊಂಡಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತವಾಗಿದೆ. ಪಕ್ಷೇತರರಾಗಿ ಸ್ಪರ್ಧಿಸುವಂತೆ ಸ್ವಾಮೀಜಿಯವರ ಬೆಂಬಲಿಗರು ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಸ್ವಾಮೀಜಿಯವರ ತೀರ್ಮಾನ ಕುರಿತು ಕುತೂಹಲ ಮೂಡಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಆನಂದ್ ಅಸೂಟಿ ಅವರ ಬದಲಿಗೆ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಟಿಕೆಟ್ ನೀಡುವಂತೆ ಶಾಸಕ ವಿನಯ್ ಕುಲಕರ್ಣಿ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇದರ ಜೊತೆಗೆ ದಿಂಗಾಲೇಶ್ವರ ಶ್ರೀಗಳ ಮನವೊಲಿಕೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದರೆ ಲಿಂಗಾಯಿತ ಸಮುದಾಯದ ಮತಗಳ ಜೊತೆಗೆ ಅಹಿಂದ ಮತಗಳು ಲಭಿಸಿದರೆ ಗೆಲುವು ಖಚಿತ ಎಂಬ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ. ಆದರೆ ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಲು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಮೂಡಿದ್ದು, ಇದರ ಮಧ್ಯೆ ಮಾತನಾಡಿರುವ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸ್ವಾಮೀಜಿಗಳ ಮನವೊಲಿಸುತ್ತೇವೆ. ಈ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿಯವರ ಗೆಲುವು ಖಚಿತ ಎಂದು ಹೇಳಿದ್ದಾರೆ.