
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಶಾಸಕ ವಿನಯ್ ಕುಲಕರ್ಣಿಯೇ ಪ್ರಮುಖ ಕಾರಣ ಅವರ ಸೂಚನೆ ಮೇರೆಗೆ ಬೆಂಗಳೂರಿನಿಂದ ಕೆಲವರನ್ನು ಕರೆಸಿ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತಾಗಿ ಶಾಸಕ ವಿನಯ್ ಕುಲಕರ್ಣಿ ಆಪ್ತರಾಗಿದ್ದ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಈ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮೊದಲನೆಯ ಆರೋಪಿ ಮತ್ತು ವಿನಯ್ ಕುಲಕರ್ಣಿ ಆಪ್ತನಾಗಿದ್ದ ಬಸವರಾಜ ಮುತ್ತಗಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಯೋಗೇಶ್ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಹೇಳಿಕೆ ಸಹಿಸದೇ ವಿನಯ್ ಕುಲಕರ್ಣಿ ಹತ್ಯೆಗೆ ಸಂಚು ರೂಪಿಸಿದ್ದರು.
ಮೊದಲಿಗೆ ಧಾರವಾಡದ ಕೆಲವರಿಗೆ ಹತ್ಯೆಗೆ ಸುಪಾರಿ ನೀಡಲು ವಿನಯ್ ಕುಲಕರ್ಣಿ ನಿರ್ಧರಿಸಿದ್ದರು. ಆದರೆ ಧಾರವಾಡದ ಹುಡುಗರು ಒಪ್ಪದ ಕಾರಣ ಬೆಂಗಳೂರು ಯುವಕರಿಗೆ ಸುಪಾರಿ ನೀಡಿದ್ದರು. ದಿನೇಶ್ ಎಂಬಾತ ಹತ್ಯೆಗೆ ಒಪ್ಪಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. 2016ರಲ್ಲಿ ಒಮ್ಮೆ ಹತ್ಯೆಯ ಯತ್ನ ವಿಫಲವಾಗಿದ್ದು, ನಂತರ ಜೂನ್ ನಲ್ಲಿ ಕೊಲೆ ಮಾಡಲಾಗಿತ್ತು ಎಂದು ಬಸವರಾಜ ಮುತ್ತಗಿ ಕೋರ್ಟಿಗೆ ಹೇಳಿಕೆ ನೀಡಿದ್ದು, ಇದರಿಂದಾಗಿ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.