ಕೆಆರ್ಎಸ್ ಡ್ಯಾಂ ಸಮೀಪ ಅಕ್ರಮ ಗಣಿಗಾರಿಕೆ ಸಂಬಂಧ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಡುವೆ ಮಾತಿನ ಯುದ್ಧವೇ ನಡೆದು ಹೋಗಿದೆ. ಕನ್ನಂಬಾಡಿ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂಬ ಸುಮಲತಾ ಹೇಳಿಕೆ ಬೆನ್ನಲ್ಲೇ ಇದೀಗ ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆ ನೋಡ್ತಿದ್ರೆ ದಳಪತಿಗಳು ಈ ಕಾಳಗದಿಂದ ಹಿಂದೆ ಸರಿದರಾ ಎಂಬ ಅನುಮಾನ ಮೂಡಿದೆ.
ಈ ಮಾತಿಗೆ ಪುಷ್ಠಿ ಎಂಬಂತೆ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಜೆಡಿಎಸ್ ಶಾಸಕ ಸುರೇಶ್ ಗೌಡ ಮಾತನಾಡಿದ್ದು ತಾಯಿ ಸಮಾನರಾದ ಸುಮಲತಾ ನಮ್ಮ ತಪ್ಪುಗಳನ್ನ ಹೊಟ್ಟೆಗೆ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಯಾರೇ ಅಕ್ರಮ ಗಣಿಗಾರಿಕೆ ಮಾಡಿದ್ರೂ ಅದನ್ನ ನಿಲ್ಲಿಸಲಿ. ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳು ಭಯೋತ್ಪಾದಕರ ರೀತಿ ವರ್ತಿಸುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆ ವಿಚಾರವಾಗಿಯೂ ಮಾತನಾಡಿದ ಸುರೇಶ್ ಗೌಡ, ನಾವೆಲ್ಲ ಅವರ ಮಕ್ಕಳಿದ್ದಂತೆ. ಮಕ್ಕಳನ್ನೇ ಭಯೋತ್ಪಾದಕರು ಎಂದು ಕರೆದರೆ ಹೇಗೆ..? ನಾವು ಮಂಡ್ಯದವರು, ಸ್ವಲ್ಪ ಒರಟು ಆದರೆ ನಮ್ಮ ಹೃದಯ ಮೃದು. ಅಂಬರೀಶಣ್ಣ ಕೂಡ ಹಾಗೇ ಅಲ್ಲವೇ..? ಅಂಬರೀಶಣ್ಣ ಬೈದಿಲ್ಲ ಅಂದರೆ ನಮಗೆ ಸಮಾಧಾನವೇ ಆಗ್ತಿರಲಿಲ್ಲ. ಅಂತಹ ಮನೆಯಲ್ಲಿ ಇದ್ದ ನೀವು ಸಣ್ಣ ಪುಟ್ಟ ಪದಗಳನ್ನೇ ಇಷ್ಟು ದೊಡ್ಡ ಮಾಡಿದ್ರೆ ಹೇಗೆ…? ನಾವೇನು ಪಾಕಿಸ್ತಾನದವರಾ..? ನಾವೆಂತ ಭಯೋತ್ಪಾದಕ ಕೃತ್ಯ ಎಸಗಿದ್ದೇವೆ..? ನಮ್ಮ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರೋದು ನಿಜ. ಇದನ್ನ ಸಿಬಿಐ ತನಿಖೆಗೆ ಒಪ್ಪಿಸಿದ್ರೆ ಸಾವಿರಾರು ಕೋಟಿ ಅಕ್ರಮ ವ್ಯವಹಾರ ಬೆಳಕಿಗೆ ಬರಲಿದೆ ಎಂದು ಹೇಳಿದ್ರು.