ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್. ಕಡದಕಟ್ಟೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆಯಲ್ಲಿ ಹೋರಿ ತಿವಿದು ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ.
ಹೋರಿ ತಿವಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಅಡ್ಡವಾಗಿ ಬಂದ ವ್ಯಕ್ತಿಗೆ ಕೊಂಬುಗಳಿಂದ ಹೋರಿ ತಿವಿದಿದೆ. ಹೊಟ್ಟೆ ಹಾಗೂ ಗುಪ್ತಾಂಗದ ಭಾಗಕ್ಕೆ ತೀವ್ರ ಪೆಟ್ಟಾಗಿ ಗಾಯಗಳಾದ ಪರಿಣಾಮ ಗಂಭೀರವಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಪರ್ಧೆ ವೇಳೆ ಯುವಕ ಗಾಯಗೊಂಡಿದ್ದು, ಆತನನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಯೊಂದು ರೈತನ ಹಿಡಿತಕ್ಕೆ ಸಿಗದೆ ವೇಗವಾಗಿ ಓಡುವಾಗ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದೆ. ಇದೇ ಮಾರ್ಗವಾಗಿ ತೆರಳುತ್ತಿದ್ದ ಶಾಸಕ ರೇಣುಕಾಚಾರ್ಯ ರೈತನಿಗೆ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದ್ದಾರೆ.