ದಾವಣಗೆರೆ: ಭಾರಿ ಮಳೆಯಿಂದಾಗಿ ಚಾಮರಾಜನಗರದ ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಸುವರ್ಣಾವತಿ ನದಿ ಪ್ರವಾಹಕ್ಕೆ ಯಳಂದೂರು ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿವೆ.
ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮಳೆಯಿಂದಾಗಿ ಯಳಂದೂರು, ಮಾಂಬಳ್ಳಿ ಸೇರಿದಂತೆ ಹಲವೆಡೆ ರಸ್ತೆ, ಹಳ್ಳಿಗಳು ನೀರಿನಲ್ಲಿ ಮುಳುಗಿದ್ದವು. ಇದೀಗ ಪ್ರವಾಹ ತಗ್ಗಿದ ಬೆನ್ನಲ್ಲೇ ಜನಪ್ರತಿನಿಧಿಗಳು ಕಾಟಾಚಾರಕ್ಕಾಗಿ ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆಗೆ ಭೇಟಿ ನೀಡುತ್ತಿದ್ದಾರೆ.
ರೈತರು, ಬಡವರಿಗಾಗಿಯೇ ಸದಾ ಸ್ಪಂದಿಸುತ್ತೇನೆ ಎಂದು ಹೇಳುವ ಶಾಸಕ ಎನ್ ಮಹೇಶ್ ಇದೀಗ ಮಾಂಬಳ್ಳಿಯಲ್ಲಿ ನೆರೆ ವೀಕ್ಷಣೆಗೆ ಭೇಟಿ ನೀಡಿದ್ದು, ಅರ್ಧ ಅಡಿ ನೀರಿನಲ್ಲಿ ತೆಪ್ಪದಲ್ಲಿ ಸವಾರಿ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಮೇಲೆ ನಿಂತಿರುವ ಅರ್ಧ ಅಡಿ ನೀರಿನಲ್ಲಿ ಶಾಸಕರು ತೆಪ್ಪದಲ್ಲಿ ತೆರಳಿದ್ದು, ಅವರ ಅಕ್ಕಪಕ್ಕದಲ್ಲಿದ್ದವರು ತೆಪ್ಪದ ಪಕ್ಷದಲ್ಲಿಯೇ ನಡೆದುಕೊಂಡು ಸಾಗುತ್ತಿದ್ದಾರೆ. ಶಾಸಕರ ಕಾಟಾಚಾರದ ನೆರೆ ವೀಕ್ಷಣೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಜನರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.