
ಶಿವಮೊಗ್ಗ: ವಿದ್ಯುತ್ ಲೈನ್ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಬಿಳಕಿ ಗ್ರಾಮದಲ್ಲಿ ನಡೆದಿದೆ.
ಗೋಣಿಕೆರೆ ನಿವಾಸಿ ಕೇಶವ(27) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಬಿಳಕಿ ಗ್ರಾಮದಲ್ಲಿ ನೂತನ ವಿದ್ಯುತ್ ಪರಿವರ್ತಕ ಅಳವಡಿಸಲು ಲೈನ್ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಆರೇಳು ವರ್ಷಗಳಿಂದ ಮೆಸ್ಕಾಂ ವಿದ್ಯುತ್ ಗುತ್ತಿಗೆದಾರ ದೇವರಾಜ್ ಬಳಿ ಕೇಶವ ಕೆಲಸ ಮಾಡುತ್ತಿದ್ದರು.
ಅವರ ತಂದೆ ಗಾರೆ ಕೆಲಸಗಾರ ಶಂಕರಪ್ಪ, ತಾಯಿ, ತಂಗಿ ಇದ್ದಾರೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಕೇಶವ ಮೃತಪಟ್ಟ ಮಾಹಿತಿ ತಿಳಿದ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.