
ಮಂಡ್ಯ: ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿಯಿದ್ದರೂ ತಲೆಕೆಡಿಸಿಕೊಳ್ಳದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ್ದು, ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸದೆ ಶಾಸಕರು ಪದೇ ಪದೇ ವಿದೇಶ ಪ್ರವಾಸದಲ್ಲಿ ಕಾಲ ಕಳೆಯುತ್ತಿರುವುದಕ್ಕೆ ಕ್ಷೇತ್ರದ ಜನತೆ ಈ ಹಿಂದೆಯೇ ಕಿಡಿಕಾರಿದ್ದರು. ಜನರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ಶಾಸಕರು, ಅಮೆರಿಕಾದಲ್ಲಿ ತನ್ನ ಕಂಪನಿಯಿದೆ. ಕೆಲಸದ ನಿಮಿತ್ತ ಹೋಗಿದ್ದೆ. ಅಮೆರಿಕಾದಲ್ಲಿನ ಕಂಪನಿ ಮಾರಿ ಇನ್ಮುಂದೆ ಹುಟ್ಟೂರಿನಲ್ಲಿಯೆ ಇರುತ್ತೇನೆ. ಮತ್ತೆ ವಿದೇಶ ಪ್ರವಾಸ ಕೈಗೊಳ್ಳಲ್ಲ ಎಂದು ಹೇಳಿದ್ದರು.
ಹೀಗೆ ಹೇಳಿದ್ದ ಕೆಲವೇ ದಿನಗಳಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಶಾಸಕರು ವಿದೇಶ ಪ್ರವಾಸದಲ್ಲಿದ್ದರು. ಶಾಸಕರ ಗೈರು ಹಾಜರಿಯಲ್ಲೇ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈಗ ಮತ್ತೆ ವಿದೇಶ ಪ್ರವಾಸದಲ್ಲಿರುವ ಶಾಸಕರು ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಬರದಿಂದಾಗಿ ಜನರು ಕಂಗೆಟ್ಟಿದ್ದಾರೆ. ಇನ್ನೊಂದೆಡೆ ಕಾವೇರಿ ನೀರಿನ ಸಮಸ್ಯೆಯಿಂದಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಇಷ್ಟೆಲ್ಲ ತೊಂದರೆಗಳನ್ನು ಜನ ಎದುರಿಸುತ್ತಿದ್ದರೂ ಶಾಸಕರು ಮಾತ್ರ ವಿದೇಶ ಪ್ರವಾಸದಲ್ಲಿ ಕಾಲಕಳೆಯುತ್ತಿದ್ದು ಆಕ್ರೋಶಕ್ಕೆ ಕಾರಣವಾಗಿದೆ.