ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ನನ್ನ ಸಹಮತವಿಲ್ಲ. ವೈಯಕ್ತಿಕವಾಗಿ ಅಸಮಾಧಾನವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಬಿಜೆಪಿ ನಾಯಕರು ಮುಗಿ ಬಿದ್ದು ವಾಗ್ದಾಳಿ ನಡೆಸಿದ್ದಾರೆ. ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಬಳಿಕ ಇದೀಗ ಶಾಸಕ ಅಶ್ವತ್ಥನಾರಾಯಣ ಸೋಮಶೇಖರ್ ಹೇಳಿಕೆಗೆ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, ಬಿಜೆಪಿ-ಜೆಡಿಎಸ್ ಮೈತ್ರಿ ವರಿಷ್ಠರ ಮಟ್ಟದಲ್ಲಿ ಆಗಿರುವ ನಿರ್ಣಯ. ವೈಯಕ್ತಿಕವಾಗಿ ಯಾರೂ ಹೇಕೆಗಳನ್ನು ನೀಡಬಾರದು. ಸೋಮಶೇಖರ್ ಆಗಿರಲಿ ಯಾರೇ ಆಗಲಿ ಇಂತಹ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ವೈಯಕ್ತಿಕವಾಗಿ ಅವರವರು ಹೇಳಿ ಕೊಡುತ್ತಿರುತ್ತಾರೆ. ಆದರೆ ಮೈತ್ರಿ ವಿಚಾರ ವರಿಷ್ಠರ ಮಟ್ಟದಲ್ಲಿ ಆಗಿರುವಂತದ್ದು. ಹಾಗಾಗಿ ಯಾರೂ ಕೂಡ ಇಂತಹ ಹೇಳಿಕೆ ಕೊಡಬಾರದು. ಈ ರೀತಿ ಹೇಳಿಕೆಗಳು ಪಕ್ಷ ವಿರೋಧಿಯಾಗುತ್ತದೆ ಎಂದಿದ್ದಾರೆ.
ಅಸಮಾಧಾನ, ವ್ಯತ್ಯಾಸವಿದ್ದರೆ ಪಕ್ಷದ ನಾಯಕರ ಜೊತೆ ಮಾತನಾಡಬೇಕು. ಹಾಗಾಗಬಾರದಿತ್ತು, ಹೀಗಾಗಬಾರದಿತ್ತು ಎನ್ನಲು ನಾವು ಪಕ್ಷಕ್ಕಿಂತ ದೊಡ್ಡವರಲ್ಲ. ಪಕ್ಷದಲ್ಲಿನ ಜವಾಬ್ದಾರಿಯುತ ವ್ಯಕ್ತಿಗಳು ನಿರ್ಣಯ ಕೈಗೊಂಡಾಗ ಸಹಕರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.