ಚೆನ್ನೈ: ಕರ್ನಾಟಕ ಹಾಲು ಒಕ್ಕೂಟ -ಕೆಎಂಎಫ್ ಮೊಸರು ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿ ಭಾಷೆಯಲ್ಲಿ ದೊಡ್ಡದಾಗಿ ಬರೆಯಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚನೆ ನೀಡಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿ ಹೇರಿಕೆಯ ಮುಜುಗರವಿಲ್ಲದ ಒತ್ತಾಯ ಮೊಸರು ಪ್ಯಾಕೆಟ್ ಗೂ ನಿರ್ದೇಶಸುವ ಮಟ್ಟಕ್ಕೆ ಬಂದಿದೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಸರು ಪ್ಯಾಕೆಟ್ ಮೇಲೆ ದಹಿ ಎಂದು ಹಿಂದಿ ಭಾಷೆಯಲ್ಲಿ ದೊಡ್ಡದಾಗಿ ಬರೆಯಬೇಕೆಂಬುದು ಸರಿಯಲ್ಲ ಎಂದು ಕಟುವಾಗಿ ಟೀಕಿಸಿರುವ ಸ್ಟಾಲಿನ್, ಇಂತಹ ಆದೇಶ ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುತ್ತದೆ. ನಮ್ಮ ಮಾತೃಭಾಷೆಯ ಬಗ್ಗೆ ಇಂತಹ ನಿರ್ಲಜ್ಜ ನಿರ್ಲಕ್ಷ ತೋರಲು ಕಾರಣರಾದವರನ್ನು ದಕ್ಷಿಣದಿಂದ ಗಡಿಪಾರು ಮಾಡಲಾಗುವುದು ಎಂದು ಗುಡುಗಿದ್ದಾರೆ.
ಸ್ಟಾಲಿನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ಮೊಸರಿಗೆ “ದಹಿ” ಎಂದು ಲೇಬಲ್ ಮಾಡಲು ನಿರ್ದೇಶಿಸುವ ಕುರಿತು ಸುದ್ದಿ ವರದಿಯನ್ನು ಪೋಸ್ಟ್ ಮಾಡಿದ್ದಾರೆ.