
ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ(ಎಎಸ್ಎಫ್) ಹೊಸ ಪ್ರಕರಣಗಳು ಪತ್ತೆಯಾದ ನಂತರ ಮಿಜೋರಾಂ ಸರ್ಕಾರ ಹಂದಿಗಳು ಮತ್ತು ಹಂದಿ ಉತ್ಪನ್ನಗಳ ಆಮದು ನಿಷೇಧಿಸಿದೆ.
ಅಧಿಕೃತ ಅಧಿಸೂಚನೆಯ ಪ್ರಕಾರ, ಮುಂದಿನ ಆದೇಶದವರೆಗೆ ಇತರ ರಾಜ್ಯಗಳು ಮತ್ತು ಇತರ ದೇಶಗಳಿಂದ ಜೀವಂತ ಹಂದಿಗಳು, ತಾಜಾ ಹಂದಿಗಳು ಮತ್ತು ಹೆಪ್ಪುಗಟ್ಟಿದ ಹಂದಿಮಾಂಸ ಸೇರಿದಂತೆ ಎಲ್ಲಾ ಇತರ ಹಂದಿಮಾಂಸ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಿಳಿಸಲಾಗಿದೆ.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯು ಹಂದಿ ಸಾಕಣೆ ಆವರಣದಲ್ಲಿ ಕಡ್ಡಾಯವಾಗಿ ಸೋಂಕು ತಡೆ ಕ್ರಮ ಕೈಗೊಳ್ಳಬೇಕು. ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳ ಕೈಗೊಳ್ಳುವ ಜೊತೆಗೆ ಶಂಕಿತ ಹಂದಿಗಳ ಪ್ರತ್ಯೇಕತೆಯಲ್ಲಿಡಬೇಕೆಂದು ಹೇಳಲಾಗಿದೆ.
ಆಫ್ರಿಕನ್ ಹಂದಿ ಜ್ವರದ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಗೆ ಅನುಗುಣವಾಗಿ ಹಂದಿ ಮೃತದೇಹವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಹಂದಿಗಳ ಯಾವುದೇ ಅಸಹಜ ಮರಣದ ತಕ್ಷಣದ ವರದಿಗಾಗಿ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಲಾಗಿದೆ.
ಇತ್ತೀಚಿನ ಅಲೆಯಲ್ಲಿ 384 ಹಂದಿ ಸಾವುಗಳು ವರದಿಯಾಗಿವೆ. ಅಧಿಕಾರಿಗಳ ಪ್ರಕಾರ ಐದು ಜಿಲ್ಲೆಗಳಲ್ಲಿ ಇತ್ತೀಚಿನ ಸಾವುಗಳು ವರದಿಯಾಗಿವೆ. ಎಎಸ್‌ಎಫ್ ಕಳೆದ ವರ್ಷ ಮಾರ್ಚ್‌ನಿಂದ ನವೆಂಬರ್‌ವರೆಗೆ 33,417 ಹಂದಿಗಳನ್ನು ಬಲಿ ತೆಗೆದುಕೊಂಡಿದ್ದು, 60.82 ಕೋಟಿ ರೂಪಾಯಿ ನಷ್ಟವಾಗಿದೆ. ರೋಗ ಹರಡುವುದನ್ನು ತಡೆಯಲು ಕಳೆದ ವರ್ಷ ಒಟ್ಟು 10,910 ಹಂದಿಗಳನ್ನು ಕೊಲ್ಲಲಾಗಿದೆ. ಈಗ ಮತ್ತೆ ಆಫ್ರಿಕನ್ ಹಂದಿ ಜ್ವರದ ಮಧ್ಯೆ ಹಂದಿಗಳು, ಹಂದಿಮಾಂಸ ಉತ್ಪನ್ನಗಳ ಆಮದನ್ನು ಮಿಜೋರಾಂ ನಿಷೇಧಿಸಿದೆ.