ಶುಕ್ರವಾರದಂದು ಸುಪ್ರೀಂ ಕೋರ್ಟ್ ಆವರಣದಲ್ಲಿ ಮಿಟ್ಟಿ ಕೆಫೆಯೊಂದು ಆರಂಭಗೊಂಡಿದೆ. ವಿಶೇಷ ಅಂದರೆ ಈ ಮಿಟ್ಟಿ ಕೆಫೆಯಲ್ಲಿ ದಿವ್ಯಾಂಗರೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶದಲ್ಲಿ ವಿಶೇಷ ಸಾಮರ್ಥ್ಯವುಳ್ಳವರಿಗೂ ಉದ್ಯೋಗಾವಕಾಶ ಕಲ್ಪಿಸುವ ಸಣ್ಣ ಪ್ರಯತ್ನವೆಂಬಂತೆ ಈ ಕೆಫೆ ಆರಂಭಗೊಂಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸೇರಿದಂತೆ ಇತರೆ ಕೆಲವು ಸಹೋದ್ಯೋಗಿ ನ್ಯಾಯಮೂರ್ತಿಗಳು ಮಿಟ್ಟಿ ಕೆಫೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಕೆಫೆಯಲ್ಲಿ ಪಾರ್ಶ್ವವಾಯು , ದೃಷ್ಟಿಹೀನರು ಹೀಗೆ ವಿಶೇಷ ಸಾಮರ್ಥ್ಯವುಳ್ಳವರೇ ಕೆಲಸಕ್ಕಿದ್ದಾರೆ.
ವಿಶೇಷ ಸಾಮರ್ಥ್ಯವುಳ್ಳವರ ಕಲ್ಯಾಣಕ್ಕೆಂದೇ ನಿರ್ಮಾಣಗೊಂಡಿರುವ ಮಿಟ್ನಿ ದೇಶದಲ್ಲಿ 35 ಕ್ಕೂ ಅಧಿಕ ಕೆಫೆಗಳನ್ನು ಹೊಂದಿದೆ. ನೂರಾರು ದಿವ್ಯಾಂಗರಿಗೆ ಕೆಲಸ ನೀಡುವ ಕಾರ್ಯವನ್ನು ಮಿಟ್ಟಿ ಸಂಸ್ಥೆ ಮಾಡುತ್ತಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಪ್ರೋ, ಎಕ್ಸೆಂಚರ್ ಹಾಗೂ ಎಎನ್ಝೆಡ್ ಬ್ಯಾಂಕ್ಗಳಲ್ಲಿ 10 ಮಿಲಿಯನ್ಗೂ ಅಧಿಕ ಮಂದಿಗೆ ಮಿಟ್ಟಿ ಕೆಫೆ ಆಹಾರ ನೀಡುತ್ತಿದೆ.
ಸುಪ್ರೀಂ ಕೋರ್ಟ್ನಲ್ಲಿ ಮಿಟ್ಟಿ ಕೆಫೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಜೆಐ ಚಂದ್ರಚೂಡ್ ಅವರು, ವಿಶೇಷ ಸಾಮರ್ಥ್ಯವುಳ್ಳವರ ಜೀವನೋಪಾಯ ಹಾಗೂ ಘನತೆಗೆ ಬೆಲೆ ನೀಡುತ್ತಿರುವ ಮಿಟ್ಟಿ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎಲ್ಲಾ ವಕೀಲರು ಕೂಡ ಈ ದಿವ್ಯಾಂಗರ ಕೆಫೆಗೆ ಬೆಂಬಲ ನೀಡಿ ಇಲ್ಲೇ ಆಹಾರವನ್ನು ಖರೀದಿ ಮಾಡಬೇಕು ಎಂದು ನಾನು ಆಶಿಸುತ್ತೇನೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.