ಕಾರವಾರ: ಕರ್ನಾಟಕ-ಗೋವಾ ಗಡಿ ವಿವಾದ ಆಗಾಗ ತಾರಕಕ್ಕೇರುತ್ತಿರುವಾಗಲೇ ಗೋವಾ ಸರ್ಕಾರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ತನ್ನ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರ, ಜೋಯಿಡಾ ಸೇರಿದಂತೆ ಗಡಿಯಲ್ಲಿರುವ ಕೆಲ ತಾಲೂಕುಗಳಲ್ಲಿ ತನ್ನ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಬೀದಿ ನಾಯಿಗಳ ಹಾವಳಿಯಿಂದಾಗಿ ಜನ-ಜಾನುವಾರಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಆದರೆ ರೇಬೀಸ್ ಚುಚ್ಚುಮದ್ದು ಯೋಜನೆಯಿಂದ ವಂಚಿತವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿ ಭಾಗದಲ್ಲಿರುವ ತಾಲೂಕುಗಳಲ್ಲಿ ಬೀದಿನಾಯಿಗಳಿಗೆ ಲಸಿಕೆ ನೀಡುವ ಕಾರ್ಯ ನಡೆದಿಲ್ಲ. ಇದರಿಂದ ದೇಶದಲ್ಲಿಯೇ ರೇಬೀಸ್ ಮುಕ್ತ ರಾಜ್ಯವಾಗಿರುವ ಗೋವಾ, ಕರ್ನಾಟಕದ ಗಡಿ ತಾಲೂಕುಗಳಲ್ಲಿ ಮಿಷನ್ ರೇಬೀಸ್ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಗೆ ತಗುಲುವ ಖರ್ಚು ವೆಚ್ಚವನ್ನು ತನ್ನ ಬೊಕ್ಕಸದಿಂದಲೇ ಭರಿಸಿ ಕ್ರಾರ್ಯಕ್ರಮ ಜಾರಿ ಮಾಡಿದೆ.
ಕಾರವಾರದಲ್ಲಿ ಈವರೆಗೆ 24 ನಾಯಿಗಳಿಗೆ ರೇಬೀಸ್ ಇರುವುದಾಗಿ ಗೋವಾ ಸರ್ಕಾರ ನಡೆಸಿರುವ ಪರೀಕ್ಷೆಯಲ್ಲಿ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಕಾರವಾರ, ಜೋಯಿಡಾ ತಾಲೂಕಿನಲ್ಲಿ ತನ್ನ ಸರ್ಕಾರದ ಯೋಜನೆ ಜಾರಿ ಮಾಡಿದೆ. ಕಾರವಾರದಲ್ಲಿ ಗೋವಾ ರಾಜ್ಯದ ತಂಡ, ಕಳೆದ ಎರಡು ವಾರಗಳಲ್ಲಿ 2500ಕ್ಕೂ ಹೆಚ್ಚು ಶ್ವಾನಗಳಿಗೆ ರೇಬೀಸ್ ಚುಚ್ಚುಮದ್ದು ನೀಡಿದೆ. ಉಚಿತ ಚುಚ್ಚುಮದ್ದಿನ ಜೊತೆಗೆ 24X7 ಹೆಲ್ಪ್ ಲೈನ್ ಕೂಡ ತೆರೆದಿದೆ.