ಬೆಂಗಳೂರು: ವಿದ್ಯಾರ್ಥಿಗಳಿಗೆ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಮಿಷನ್ ಲೈಫ್ ಕಾರ್ಯಕ್ರಮ ಆಯೋಜಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ ಸೂಚನೆ ನೀಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದ ಮೇರೆಗೆ ಸಮಗ್ರ ಶಿಕ್ಷಣ ಕರ್ನಾಟಕ ಈ ಸೂಚನೆ ನೀಡಿದೆ. ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ದೇಶಾದ್ಯಂತ ಶಾಖದ ಅಲೆಗಳು, ಉಲ್ಬಣಗೊಳ್ಳುತ್ತಿರುವ ಹವಾಮಾನ ಬಿಕಟ್ಟುಗಳಿಂದ ಭೂಮಿ ರಕ್ಷಿಸಲು ಸಜ್ಜುಗೊಳ್ಳಬೇಕಿದೆ. ವೇಗವಾಗಿ ಬದಲಾವಣೆಯಾಗುತ್ತಿರುವ ಜಗತ್ತಿನಲ್ಲಿ ಉತ್ತಮ, ಯಶಸ್ವಿ, ನವೀನ, ಹೊಂದಿಕೊಳ್ಳುವ ಮತ್ತು ಉತ್ಪಾದಕ ಮಾನವರಾಗಲು ಕೆಲವು ವಿಷಯಗಳು, ಕೌಶಲಗಳು ಸಾಮರ್ಥ್ಯಗಳನ್ನು ಎಲ್ಲಾ ವಿದ್ಯಾರ್ಥಿಗಳು ಕಲಿಯಬೇಕು ಎಂದು ತಿಳಿಸಿದ್ದು, ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಿಷನ್ ಲೈಫ್ ಹೆಸರಿನಲ್ಲಿ ಹಲವು ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಲಾಗಿದೆ.