ಲಕ್ನೋ: ಜಾರ್ಖಂಡ್ ನಲ್ಲಿ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 23 ವರ್ಷದ ಬುಡಕಟ್ಟು ಯುವತಿಯೊಬ್ಬಳು ಆಧಾರ್ ಕಾರ್ಡ್ ಡೇಟಾಬೇಸ್ ಸಹಾಯದಿಂದ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾಳೆ.
ಜಾರ್ಖಂಡ್ ನ ದಿನಗೂಲಿ ಕಾರ್ಮಿಕನ ಪುತ್ರಿ ರಶ್ಮಣಿಗೆ 2017 ರಲ್ಲಿ ದೆಹಲಿಯಲ್ಲಿ ಕೆಲಸ ನೀಡುವುದಾಗಿ ಏಜೆಂಟ್ ವೊಬ್ಬ ಭರವಸೆ ನೀಡಿದ್ದ. ಆಕೆಯ ಕುಟುಂಬ ಆರ್ಥಿಕ ಒತ್ತಡದಲ್ಲಿದ್ದ ಕಾರಣ, ರಶ್ಮಣಿ ದೆಹಲಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು.
ಏಜೆಂಟ್ ನೊಂದಿಗೆ ರೈಲು ಹತ್ತಿದ ನಂತರ ರಶ್ಮಣಿ ಮುಂದಾಗಲಿರುವ ತೊಂದರೆಯನ್ನು ಗ್ರಹಿಸಿ ಫತೇಪುರ್ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದಾಳೆ.
ರೈಲ್ವೇ ಪೊಲೀಸರು ಆಕೆಯನ್ನು ರಕ್ಷಿಸಿ ಆಶ್ರಯಧಾಮದಲ್ಲಿ ಇರಿಸಲಾಗಿದ್ದು, ಆಕೆಗೆ ರಾಶಿ ಎಂದು ಹೆಸರಿಡಲಾಗಿದೆ.
ಆಕೆಯ ಸ್ಥಳೀಯ ಸ್ಥಳಕ್ಕೆ ಹೋಗಲು ಹಲವಾರು ಪ್ರಯತ್ನಗಳು ವಿಫಲವಾದಾಗ, ಪೊಲೀಸರು ಅವಳನ್ನು ಅಲಹಾಬಾದ್ ನಲ್ಲಿರುವ ಮಹಿಳಾ ಆಶ್ರಯ ಮನೆಗೆ ಕಳುಹಿಸಿದ್ದರು.
ಲಕ್ನೋದ ಮಹಿಳಾ ಆಶ್ರಯಧಾಮದ ಸೂಪರಿಂಟೆಂಡೆಂಟ್ ಆರ್ತಿ ಸಿಂಗ್ ಮಾತನಾಡಿ, ಜುಲೈನಲ್ಲಿ ಆಕೆಯನ್ನು ಪುನರ್ವಸತಿಗಾಗಿ ಲಕ್ನೋಗೆ ಕರೆತರಲಾಯಿತು. ನಾವು ಅವಳ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದೆವು. ಆದರೆ, ಅದನ್ನು ತಿರಸ್ಕರಿಸಲಾಯಿತು. ಆರನೇ ಪ್ರಯತ್ನದಲ್ಲಿ, ಅದು ನಕಲು ತೋರಿಸಿತು. ನಂತರ ಮೂಲ ವಿಳಾಸ ಪತ್ತೆಹಚ್ಚಲಾಯಿತು. ಅಂತಿಮವಾಗಿ, ರಶ್ಮಣಿಯನ್ನು ಜಾರ್ಖಂಡ್‌ಗೆ ಕರೆದೊಯ್ದು ಆಕೆಯ ಕುಟುಂಬದೊಂದಿಗೆ ಮತ್ತೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.