ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನನ್ನ ಕಾರು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದರು ಎಂದು ಅವರು ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಮಾತನಾಡಿದ ಮಂಜುನಾಥ್, ಪೊಲೀಸ್ ಠಾಣೆಗೆ ಹೋದಾಗ ರಾಜೀ ಮಾಡಿ ಕಳುಹಿಸಿದ್ದರು. ಹೀಗಾಗಿ ನಾನು ಮಂಗಳವಾರ ಸಂಜೆ ಊರು ಬಿಟ್ಟು ಹೋಗಿದ್ದೆ. ಎಲ್ಲಿಗೆ ಹೋಗಬೇಕು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಹೀಗಾಗಿ ಕಾರಿನಲ್ಲಿ ಓಡಾಡಿಕೊಂಡು ಸಮಯ ಕಳೆದೆ. ನೀರು, ಎಳನೀರು ಕುಡಿದು ದಿನವನ್ನು ದೂಡಿದೆ ಎಂದು ತಿಳಿಸಿದ್ದಾರೆ.
ನಕಲಿ ವೈದ್ಯನ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಕ್ಕೆ ನನಗೆ ಜಯರಾಜ್ ಮತ್ತು ಆತನ ಬೆಂಬಲಿಗರು ಬೆದರಿಕೆ ಹಾಕಿದ್ದರು. ಜಪ್ತಿ ಮಾಡಿದ ಔಷಧ ಹಿಂತಿರುಗಿಸುವಂತೆ ಧಮಕಿ ಹಾಕಿದ್ದರು. ನಾನು ನಾಪತ್ತೆಯಾದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿ ಸಿಬ್ಬಂದಿ ಕಣ್ಣೀರು ಹಾಕಿದ್ದನ್ನು ಟಿವಿಯಲ್ಲಿ ನೋಡಿದೆ. ಹೀಗಾಗಿ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಹೊಸಕೋಟೆಗೆ ವಾಪಸ್ ಬರುವುದಾಗಿ ತಿಳಿಸಿದೆ ರಕ್ಷಣೆ ಕೋರಿ ಮನವಿ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.
ಜಯರಾಜ್ ಮತ್ತು ಬೆಂಬಲಿಗರ ಜೀವ ಬೆದರಿಕೆ ಇದ್ದು ರಕ್ಷಣೆಗೆ ಎಸ್ಪಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಮಂಜುನಾಥ್ ಅವರು 3 ದಿನಗಳಿಂದ ನಾಪತ್ತೆಯಾಗಿ ಇವತ್ತು ಬೆಳಗ್ಗೆ ಪತ್ತೆಯಾಗಿದ್ದರು.