ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ನರ್ಮದಾ ನದಿಯ ನೀರಿನಲ್ಲಿ ವೃದ್ಧ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಕೂಡಲೇ ನದಿಯತ್ತ ದೌಡಾಯಿಸಿದ ಜನರು, ಮಹಿಳೆಯನ್ನು ನೋಡಲು ಉತ್ಸುಕರಾಗಿದ್ದಾರೆ. ನೀರಿನಿಂದ ಹೊರಬಂದ ವೃದ್ಧೆಯನ್ನು ತಾಯಿ ನರ್ಮದಾ ದೇವಿಯ ರೂಪ ಅಂತಾ ಜನರು ಕೊಂಡಾಡಲು ಶುರು ಮಾಡಿದ್ರು.
ಹೌದು, ಜಬಲ್‌ಪುರದ ತಿಲ್ವಾರಾ ಘಾಟ್‌ನಲ್ಲಿರುವ ನರ್ಮದಾ ನದಿ ಬಳಿ ಈ ವಿಲಕ್ಷಣ ಘಟನೆ ನಡೆದಿದೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಸ್ಥಳೀಯರು ಮಹಿಳೆಯನ್ನು ನೋಡಲು ಮುಗಿಬಿದ್ದಿದ್ರು. ನೀರಿನ ಮೇಲೆ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ಮಾತ್ರ ಯಾವುದೋ ಒಂದು ಕಾಲ್ಪನಿಕ ಕಥೆಯಂತಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆಗಮಿಸಿದ್ದಾರೆ. ನೀರಿನಿಂದ ಹೊರಬಂದ ವೃದ್ಧ ಮಹಿಳೆ ಮಾತ್ರ ಮಹಿಳೆ ತಾನು ನೀರಿನ ಮೇಲೆ ನಡೆದಿರುವುದನ್ನು ನಿರಾಕರಿಸಿದ್ದಾಳೆ. ತಾನು ಯಾವುದೇ ದೇವತೆಯ ಅವತಾರವಲ್ಲ ಎಂದೂ ಕೂಡ ಹೇಳಿದ್ದಾಳೆ.
ಜ್ಯೋತಿ ರಘುವಂಶಿ ಎಂಬ ಮಹಿಳೆ ತಾನು 10 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ನರ್ಮದಾಪುರಂ ನಿವಾಸಿ ಎಂದು ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾಳೆ. ಪೊಲೀಸರು ತಕ್ಷಣ ಆಕೆಯ ಕುಟುಂಬವನ್ನು ಸಂಪರ್ಕಿಸಿ ನರ್ಮದಾಪುರಂನಲ್ಲಿರುವ ಆಕೆಯ ಕುಟುಂಬಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ರು.
ಇನ್ನು ನರ್ಮದಾ ನದಿಯ ನೀರಿನ ಮಟ್ಟವು ಬದಲಾಗುತ್ತಿದ್ದು, ಕೆಲವು ಸ್ಥಳಗಳಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಿದೆ. ಹೀಗಾಗಿ ವೃದ್ಧೆ ಅನಾಯಾಸವಾಗಿ ನೀರಿನ ಮೇಲೆ ನಡೆದಿದ್ದಾಳೆ. ನೀರಿನ ಮಟ್ಟ ತುಂಬಾ ಕಡಿಮೆ ಇರುವ ಸ್ಥಳದಲ್ಲಿ ಮಹಿಳೆ ನದಿಯ ತಳದಲ್ಲಿ ನಡೆದು ಸಾಗಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ಈ ರೀತಿ ವದಂತಿ ಹಬ್ಬಿದೆ.