ಬೆಂಗಳೂರು: ಮದುವೆಯಾದ ಮೂರೇ ದಿನಕ್ಕೆ ನಾಪತ್ತೆಯಾಗಿದ್ದ ನವ ವಧು ಪ್ರಿಯಕರನೊಂದಿಗೆ ಪ್ರತ್ಯಕ್ಷವಾಗಿದ್ದಾಳೆ. ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ ಕೆಲವೇ ನಿಮಿಷದಲ್ಲಿ ಆಕೆ ಪ್ರಿಯಕರೊಂದಿಗೆ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ.
ಆನೇಕಲ್ ಸಮೀಪದ ದೊಡ್ಡಕಲ್ಲಸಂದ್ರ ನಿವಾಸಿ ಮಂಜುನಾಥ ದೂರು ನೀಡಿದ್ದರು. ನಾಪತ್ತೆಯಾಗಿದ್ದ ಅವರ ಪತ್ನಿ ಪ್ರಿಯಕರ ನಿತಿನ್ ಜೊತೆಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಹೈಡ್ರಾಮಾದ ನಂತರ ಪ್ರಿಯತಮೆ ಬೇಡವೆಂದು ಪ್ರಿಯಕರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನ್ಯಾಯ ಕೊಡಿಸುವಂತೆ ಪತಿ ಮಂಜುನಾಥ್ ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ. ಮಂಜುನಾಥ್ ಜೊತೆಗೆ ಬಲವಂತದಿಂದ ಮದುವೆಯಾಗಿದ್ದೆ ಎಂದ ಯುವತಿ ಪೋಷಕರ ಮನೆ ಸೇರಿದ್ದಾಳೆ.
ಮಂಜುನಾಥ್ ಮತ್ತು ಯುವತಿ ಸಂಬಂಧಿಕರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಹಿರಿಯರ ಒಪ್ಪಿಗೆ ಇರಲಿಲ್ಲ. ಈ ಹಿಂದೆ ಎರಡು ಸಲ ಸರಳವಾಗಿ ಮದುವೆಯಾಗಿದ್ದರು. ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುವುದಾಗಿ ಹೇಳಿ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದು, ಮದುವೆ ಮಾಡಿರಲಿಲ್ಲ.
ಕೆಲವು ದಿನಗಳ ಹಿಂದೆ ಮಂಜುನಾಥ್ ಮನೆಗೆ ಬಂದಿದ್ದ ಯುವತಿ ಮದುವೆಯಾಗಲು ಒತ್ತಾಯಿಸಿದ್ದರು. ಜನವರಿ 26ರಂದು ಆತನ ಮನೆಯವರು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದು, ಯುವತಿ ಮನೆಯವರು ತಲಘಟ್ಟಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಠಾಣೆಗೆ ಬಂದ ಯುವತಿ ಒಪ್ಪಿಗೆ ಮೇರೆಗೆ ಮಂಜುನಾಥ್ ಜೊತೆ ಹೋಗಿರುವುದಾಗಿ ಹೇಳಿದ್ದಳು. ನಂತರ ಮೂರೇ ದಿನದಲ್ಲಿ ನಾಪತ್ತೆಯಾಗಿದ್ದಳು.
ಯುವತಿ ಎರಡು ಕಡೆ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ. ವಂಚನೆಗೊಳಗಾದ ಯುವಕರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.