ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದ ಬಳಿ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.
9 ವರ್ಷದ ವರುಣ್ ಮತ್ತು 5 ವರ್ಷದ ಸಣ್ಣಯ್ಯ ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಬಲ್ಲಟಗಿ ಗ್ರಾಮದ ಜಾತ್ರೆಗೆ ಬಂದಿದ್ದ ಇವರು ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಬಾಲಕರು ನಾಪತ್ತೆಯಾಗಿದ್ದರಿಂದ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿತ್ತು. ಸಮೀಪದ ಹಳ್ಳದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇವರು ಸ್ನಾನ ಮಾಡಲು ಹಳ್ಳಕ್ಕೆ ಇಳಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರು, ಬಂಧು-ಬಾಂಧವರು ತೀವ್ರ ಹುಡುಕಾಟ ನಡೆಸಿದರೂ ಸುಳಿವು ಪತ್ತೆಯಾಗಿರಲಿಲ್ಲ. ಇಂದು ಹಳ್ಳದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಇಬ್ಬರೂ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಮೊಮ್ಮಕ್ಕಳಾಗಿದ್ದಾರೆ. ಸಿರಿವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.