ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ನಡೆದಿದೆ.
ಮನೆಯವರು ಮೃತಪಟ್ಟಿದ್ದಾನೆ ಎಂದು ತಿಳಿದಿದ್ದ ವ್ಯಕ್ತಿ ಅಸಲಿಗೆ ಮೃತಪಟ್ಟಿರಲಿಲ್ಲ. ಶ್ರೀನಿವಾಸ ಎಂಬ ವ್ಯಕ್ತಿ ಜನವರಿ 26 ರಂದು ನಾಪತ್ತೆಯಾಗಿದ್ದರು. ಫೆಬ್ರವರಿ 3 ರಂದು ಕಲ್ಲುಂಜಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅನಾಥ ಶವ ಪತ್ತೆಯಾಗಿದ್ದು, ಶ್ರೀನಿವಾಸ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಕುಟುಂಬದವರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಜ್ಯೋತಿಷಿಯೊಬ್ಬರ ಬಳಿ ಪ್ರಶ್ನೆ ಕೇಳಿದಾಗ ಶ್ರೀನಿವಾಸ ಮೃತಪಟ್ಟಿಲ್ಲ. ಆತ ಬರುತ್ತಾನೆ ಎಂದು ಜ್ಯೋತಿಷಿ ತಿಳಿಸಿದ್ದಾರೆ. ಆದರೆ 10 ದಿನ ಕಳೆದರೂ ಶ್ರೀನಿವಾಸ ಮರಳಿ ಬಾರದ ಕಾರಣ ಮನೆಯವರು ವೈಕುಂಠ ಸಮಾರಾಧನೆ ನಡೆಸಿದ್ದಾರೆ. ವೈಕುಂಠ ಸಮಾರಾಧನೆ ನಡೆಯುವ ವೇಳೆಯಲ್ಲಿ ಶ್ರೀನಿವಾಸ ಮನೆಗೆ ಮರಳಿದ್ದಾನೆ ಎಂದು ಹೇಳಲಾಗಿದೆ.