ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವುದು ಅಸಾಧ್ಯವಲ್ಲವಾದ್ರೂ ಕಷ್ಟ. ಆ ಕೆಲಸ ಮಾಡುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲಿ ಟ್ರಕ್ ಚಾಲನೆ ಕೂಡ ಒಂದು. ರಂಗು ರಂಗಿನ ಜಗತ್ತಿನಲ್ಲಿ ಕ್ಯಾಟ್ ವಾಕ್ ಮಾಡ್ತಿದ್ದ ಮಾಡೆಲ್ ಒಬ್ಬಳ ದಿಢೀರ್ ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆಕೆ ಮಾಡೆಲ್ ಬದಲು ಡ್ರೈವರ್ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾಳೆ.
ವರದಿಯ ಪ್ರಕಾರ, ಮಹಿಳೆಯ ಹೆಸರು ಮಿಲೀ ಎವರ್ಟ್. ವಯಸ್ಸು 22 ವರ್ಷ. ಮಿಸ್ ಇಂಗ್ಲೆಂಡ್ ಬ್ಯೂಟಿ ಫೈನಲಿಸ್ಟ್ ಆಗಿದ್ದ ಮಿಲೀ, ಮಿಸ್ ಲಿಂಕನ್‌ಶೈರ್ ಕೂಡ ಆಗಿದ್ದಾರೆ. 2018 ರಲ್ಲಿ ಮಿಸ್ ಚಾರಿಟಿ ಪ್ರಶಸ್ತಿಯನ್ನು ಗೆದಿದ್ದ ಮಿಲೀ, ನಂತರ ಮಿಸ್ ಇಂಗ್ಲೆಂಡ್ ಬ್ಯೂಟಿ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದರು. ಇದರ ನಂತರ ಮಿಲೀ ಮಾಡೆಲ್ ವೃತ್ತಿ ಜೀವನ ಶುರು ಮಾಡಿದ್ದರು. ಆದರೆ ಈಗ ವೃತ್ತಿಪರ ಟ್ರಕ್ ಡ್ರೈವರ್ ಆಗಲು ಹೊರಟಿದ್ದಾರೆ.
ಬ್ರಿಟನ್‌ನಲ್ಲಿ ಟ್ರಕ್ ಡ್ರೈವರ್‌ಗಳ ಕೊರತೆಯಿದೆ. ಹೀಗಿರುವಾಗ ಗ್ಲಾಮರ್ ಜಗತ್ತನ್ನು ತೊರೆದು ಈ ವೃತ್ತಿಗೆ ಸೇರಲು ಮಿಲೀ ಮುಂದಾಗಿದ್ದಾರೆ. ಮಿಲೀ ಬಾಲ್ಯದಿಂದಲೂ ಹೊಲಗಳಲ್ಲಿ ಟ್ರ್ಯಾಕ್ಟರ್ ಇತ್ಯಾದಿಗಳು ಓಡಿಸುತ್ತಿದ್ದರು.
ಯುಕೆಯಲ್ಲಿ ಹೆವಿ ಗೂಡ್ಸ್ ವೆಹಿಕಲ್ಸ್ ಚಾಲಕರಲ್ಲಿ ಕೇವಲ ಶೇಕಡಾ 1 ರಿಂದ 3ರಷ್ಟು ಮಹಿಳಾ ಚಾಲಕರಿದ್ದಾರೆ. ಮಿಲೀ 44 ಟನ್ ಟ್ರಕ್‌ಗಳನ್ನು ಓಡಿಸಲು ಕ್ಲಾಸ್ 1 ಮತ್ತು 2 ಪರವಾನಗಿಗಾಗಿ ತರಬೇತಿ ಪಡೆಯುತ್ತಿದ್ದಾರೆ. ಯಾರ್ಡ್‌ನಲ್ಲಿ ಲಾರಿಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅವುಗಳನ್ನು ಬೀದಿಗಿಳಿಸುವುದಾಗಿ ಹೇಳಿದ್ದಾರೆ. ಮಹಿಳೆಯರಿಗೆ ಎಲ್ಲವೂ ಸಾಧ್ಯ. ನನ್ನಿಂದ ಇನ್ನೊಂದಿಷ್ಟು ಮಂದಿ ಸ್ಪೂರ್ತಿ ಪಡೆಯಲಿ ಎಂಬುದು ನನ್ನ ಆಸೆ ಎಂದು ಮಿಲೀ ಹೇಳಿದ್ದಾರೆ.