ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ತಿರುಚಿದ ವಿಡಿಯೋ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿಯ ನಿರೂಪಕ ರೋಹಿತ್ ರಂಜನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್ಎಫ್ಐ ಕಾರ್ಯಕರ್ತರ ಕುರಿತಾಗಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ತಿರುಚಿ ವಿಡಿಯೋ ಪ್ರಸಾರ ಮಾಡಲಾಗಿತ್ತು. ಕಾಂಗ್ರೆಸ್ ಮುಖಂಡ ರಾಮ್ ಸಿಂಗ್ ಅವರು ಬನಿ ಪಾರ್ಕ್ ಪೊಲೀಸ್ ಠಾಣೆಗೆ ಈ ಕುರಿತಾಗಿ ದೂರು ನೀಡಿದ್ದು, ರೋಹಿತ್ ರಂಜನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ವೈಯನಾಡ್ ಸಂಸದ ರಾಹುಲ್ ಗಾಂಧಿಯವರ ಕಚೇರಿ ಮೇಲೆ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ಮಕ್ಕಳು ಈ ಕೃತ್ಯವೆಸಗಿದ್ದು, ಅವರನ್ನು ಕ್ಷಮಿಸಿ ಬಿಡೋಣ ಎಂದು ಹೇಳಿದ್ದರು.
ಈ ವಿಡಿಯೋ ತಿರುಚಿದ್ದ ರೋಹಿತ್ ರಂಜನ್ ಉದಯಪುರದ ಕನ್ನಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಅನ್ವಯಿಸಿ ಪ್ರಸಾರ ಮಾಡಿದ್ದರು. ಕೇರಳ ಘಟನೆ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಕನ್ನಯ್ಯಲಾಲ್ ಹತ್ಯೆ ಆರೋಪಿಗಳಿಗೆ ಅನ್ವಯಿಸಿ ಮಕ್ಕಳು ಈ ಕೃತ್ಯವಸೆಗಿದ್ದು, ಅವರನ್ನು ಕ್ಷಮಿಸಿಬಿಡೋಣ ಎಂದಿದ್ದಾರೆ ಎಂದು ತಿರುಚಿದ ವಿಡಿಯೋ ಪ್ರಸಾರ ಮಾಡಲಾಗಿತ್ತು. ಈ ತಿರುಚಿದ ವಿಡಿಯೋವನ್ನು ಬಿಜೆಪಿ ನಾಯಕ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಮೇಲೆಯೂ ದೋಷಾರೋಪ ಹೊರಿಸಲಾಗಿದೆ. ಈ ಕುರಿತಾಗಿ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.