ಚಲಿಸುತ್ತಿರುವ ರೈಲಿನಿಂದ ಇಳಿಯಲು ಅಥವಾ ಏರಲು ಯಾವುದೇ ಕಾರಣಕ್ಕೂ ಯತ್ನಿಸಬೇಡಿ ಎಂದು ಪದೇ ಪದೇ ಹೇಳುತ್ತಿದ್ದರೂ ಸಹ ಪ್ರಯಾಣಿಕರು ಇದ್ಯಾವುದಕ್ಕೂ ಕಿವಿಗೊಡದೆ ಅವಾಂತರಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇಂತಹದೇ ಮತ್ತೊಂದು ಪ್ರಕರಣ ನಡೆದಿದೆ.
ಮಧ್ಯಪ್ರದೇಶದ ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಇತ್ತೀಚೆಗಷ್ಟೇ ಈ ಘಟನೆ ನಡೆದಿದ್ದು, ಮಧ್ಯಾಹ್ನ 2-15 ರ ಸುಮಾರಿಗೆ ಭೂಪಾಲ್ ಗೆ ತೆರಳುತ್ತಿದ್ದ ಮಾಲ್ವಾ ಎಕ್ಸ್ ಪ್ರೆಸ್ ಫ್ಲಾಟ್ಫಾರಂ ನಂಬರ್ 1ರ ಬಳಿ ಬಂದಾಗ ರೈಲಿನಲ್ಲಿದ್ದ ಓರ್ವ ಇಳಿಯಲು ಯತ್ನಿಸಿದರೆ ಮತ್ತೊಬ್ಬ ಅದೇ ಬೋಗಿಯನ್ನು ಏರಲು ಮುಂದಾಗಿದ್ದಾನೆ.
ಇದರಿಂದಾಗಿ ಇಬ್ಬರೂ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು ಚಲಿಸುತ್ತಿದ್ದ ರೈಲಿನ ಅಡಿ ಬಿದ್ದಿದ್ದಾರೆ. ಓರ್ವನನ್ನು ತಕ್ಷಣವೇ ರಕ್ಷಿಸಲಾಗಿದ್ದು, ಹಳಿ ಮೇಲೆ ಬಿದ್ದಿದ್ದ ಇನ್ನೊಬ್ಬ ಸತ್ತೇ ಹೋಗಿದ್ದಾನೆಂದು ಭಾವಿಸಲಾಗಿತ್ತಾದರೂ ಪವಾಡ ಸದೃಶದ ರೀತಿಯಲ್ಲಿ ಪಾರಾಗಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.