ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರದಿಂದ ಕೆಳಗೆ ಇಳಿಯುವ ಬಗ್ಗೆ ಭವಿಷ್ಯ ನುಡಿದ ಕೆಲವೇ ಗಂಟೆಗಳ ನಂತರ, ಸುಮಾರು 10 ಜನರ ಗುಂಪು ನಗರದ ಬಿಜೆಪಿ ನಾಯಕನ ನಿವಾಸದ ಮುಂದೆ ಅಶ್ಲೀಲ, ನಿಂದನಾತ್ಮಕ ಪೋಸ್ಟರ್ ಗಳನ್ನು ಅಂಟಿಸಿದೆ.
ಮಧ್ಯರಾತ್ರಿಯ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಸ್ಟರ್ ಗಳನ್ನು ತೆಗೆದುಹಾಕಿದರು.
ಪೋಸ್ಟರ್ ಗಳನ್ನು ಅಂಟಿಸಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗರು ಪೋಸ್ಟರ್ ಅಂಟಿಸಿದ್ದಾರೆ ಎಂದು ಎಂದು ಶಂಕಿಸಲಾಗಿದೆ.
ಶೇಷಾದ್ರಿಪುರಂ ವಿಭಾಗದ ಎಸಿಪಿ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಶಿವಕುಮಾರ್ ಪತನದ ಭವಿಷ್ಯ ನುಡಿದ ರಮೇಶ್ ಜಾರಕಿಹೊಳಿ
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಶಿವಕುಮಾರ್ ಶೀಘ್ರದಲ್ಲೇ ಮಾಜಿ ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ.
“ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಮಾಜಿ ಸಚಿವರಾಗುತ್ತಾರೆ ಮತ್ತು ಸತೀಶ್ ಜಾರಕಿಹೊಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನನಗೆ ಮಾಹಿತಿ ಇದೆ. ಕಾದು ನೋಡಿ. ಅವರು ಈಗಾಗಲೇ ಹೈಕೋರ್ಟ್ನಲ್ಲಿ ಹಿನ್ನಡೆಯನ್ನು ಎದುರಿಸಿದ್ದಾರೆ ಮತ್ತು ಅವರು ಇದ್ದಕ್ಕಿದ್ದಂತೆ ಇಷ್ಟು ಹಣವನ್ನು ಹೇಗೆ ಪಡೆದರು ಎಂಬುದನ್ನು ತೋರಿಸಬೇಕಾಗಿದೆ” ಎಂದು ರಮೇಶ್ ಹೇಳಿದರು. ಕಾಂಗ್ರೆಸ್ ಸರ್ಕಾರ ಪತನವಾದರೆ ಅದಕ್ಕೆ ಶಿವಕುಮಾರ್ ಮತ್ತು ಬೆಳಗಾವಿ ರಾಜಕೀಯದಲ್ಲಿ ಅವರ ಹಸ್ತಕ್ಷೇಪವೇ ಕಾರಣ ಎಂದು ಅವರು ಹೇಳಿದರು.