ಪೆರಿಯಾರ್ ರಾಮಸ್ವಾಮಿಯವರ ಪುತ್ಥಳಿಯೊಂದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ವೆಲ್ಲೂರಿನ ಪೆರಿಯಾರ್ ಅಧ್ಯಯನ ಕೇಂದ್ರದ ಮುಂಭಾಗದಲ್ಲಿರುವ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿರುವುದು ಪತ್ತೆಯಾಗಿದೆ. ಜೊತೆಗೆ ಪ್ರತಿಮೆಯ ತಲೆಗೆ ಕೇಸರಿ ಬಣ್ಣದ ಪುಡಿ ಎರಚಲಾಗಿದೆ.
ಬೆಳಗ್ಗೆ ಪ್ರತಿಮೆಯ ಸ್ಥಿತಿ ನೋಡಿದ ಸ್ಥಳೀಯರು, ದ್ರಾವಿಡ ಕಳಗಂ (ಡಿಕೆ) ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಡಿಕೆ ಸದಸ್ಯರು ಸ್ಥಳದ ಪರಿವೀಕ್ಷಣೆ ನಡೆಸಿದ್ರು. ನಂತರ ಪೋದನೂರು ಪೊಲೀಸ್ ಠಾಣೆಗೆ ಡಿಕೆ ಸದಸ್ಯರೇ ಮಾಹಿತಿ ನೀಡಿದ್ರು. ಮಾಹಿತಿ ಪಡೆದ ಪೊಲೀಸರ ತಂಡವೊಂದು ಸ್ಥಳಕ್ಕೆ ಆಗಮಿಸಿ, ಪ್ರತಿಮೆಯನ್ನ ಪರಿಶೀಲಿಸಿದರು.
ನಂತರ ಪ್ರತಿಮೆಗೆ ಹಾಕಿದ್ದ ಚಪ್ಪಲಿಯನ್ನು ತೆಗೆದು, ತಲೆಗೆ ಎರಚಿದ್ದ ಕೇಸರಿ ಬಣ್ಣವನ್ನ ಸ್ವಚ್ಛಗೊಳಿಸಿದ್ದಾರೆ. ಘಟನೆಯಿಂದ ನೊಂದಿರುವ ಡಿಕೆ ಕಾರ್ಯಕರ್ತರು ಪ್ರತಿಮೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಪೆರಿಯಾರ್ ಪ್ರತಿಮೆಗೆ ಅಪಮಾನ ಮಾಡಿದವರನ್ನು ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದರು. ಆನಂತರ ಪೊಲೀಸರ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ದುಷ್ಕರ್ಮಿಗಳನ್ನ ಪತ್ತೆಹಚ್ಚಲು ಪೊಲೀಸರು ಆ ಪ್ರದೇಶದಲ್ಲಿನ ಕೆಲವು ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ