ಪವಾಡಸದೃಶ ಘಟನೆಯೊಂದರಲ್ಲಿ ಸುಂಟರಗಾಳಿಗೆ ಸಿಕ್ಕಿ ಹಾರಿಹೋಗಿದ್ದ ನಾಲ್ಕು ತಿಂಗಳ ಹಸುಗೂಸು ಯಾವುದೇ ಹಾನಿಗೊಳಗಾಗದೇ ಮರದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.
ಟೆನ್ನೆಸ್ಸೀಯಲ್ಲಿ ಎದ್ದ ಸುಂಟರಗಾಳಿಗೆ ಸಿಲುಕಿ ಲಾರ್ಡ್ ಎಂಬ ನಾಲ್ಕು ತಿಂಗಳ ಮಗು ಹಾರಿಹೋಗಿತ್ತು. ಇದೀಗ ಮಗು ಸುರಕ್ಷಿತವಾಗಿ ಪತ್ತೆಯಾಗಿರೋದ್ರಿಂದ ಅದರ ಪೋಷಕರು ದೇವರ ದಯೆಯೆಂದು ಬಣ್ಣಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಟೆಂಟ್ ನಂತಹ ತಾತ್ಕಾಲಿಕ ಮನೆಯೊಳಗಿನ ಮೂಲಕ ಹಾದುಹೋದ ಸುಂಟರಗಾಳಿ ಮಗುವಿದ್ದ ತೊಟ್ಟಿಲ ಸಮೇತ ಹೊತ್ತುಕೊಂಡು ಹೋಗಿತ್ತು.
ಶಿಶುವನ್ನು ರಕ್ಷಿಸಲು ತಂದೆಯ ಪ್ರಯತ್ನಗಳ ಹೊರತಾಗಿಯೂ, ತಾಯಿಯೂ ಸುಂಟರಗಾಳಿಯ ಸುಳಿಗೆ ಸಿಲುಕಿದರು. ತನ್ನ ಇನ್ನೊಬ್ಬ ಮಗನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ತಾತ್ಕಾಲಿಕ ಮನೆಯ ಗೋಡೆಯು ಕುಸಿದು ಬಿದ್ದಿದ್ದರಿಂದ ಎಲ್ಲವೂ ನಜ್ಜುಗುಜ್ಜಾಗಿದ್ದಾಗಿ ಮಗುವಿನ ತಾಯಿ ತಿಳಿಸಿದ್ದಾರೆ.
ಸುಂಟರಗಾಳಿ ಹಾದುಹೋದ ದಾರಿಯಲ್ಲೇ ಹುಡುಕುತ್ತಾ ಹೋದ ಪೋಷಕರು ಮಗು ಕಾಣೆಯಾಗಿದೆ ಎಂದು ಆತಂಕಕ್ಕೊಳಗಾದರು. ಬಳಿಕ ಅವರು ಸುಮಾರು 25 ಅಡಿ ದೂರದಲ್ಲಿರುವ ಮರದಲ್ಲಿ ಸುರಕ್ಷಿತವಾಗಿದ್ದ ತಮ್ಮ ಮಗುವನ್ನು ಕಂಡು ಸಂತಸಪಟ್ಟರು. ಇದೇ ಸುಂಟರಗಾಳಿ ಘಟನೆಗೆ ಸಂಬಂಧಿಸಿದಂತೆ ಮೂವರು ಸಾವನ್ನಪ್ಪಿದ್ದು 24 ಮಂದಿ ಗಾಯಗೊಂಡಿರುವ ವರದಿಯಾಗಿದೆ.