ಪೊಲೀಸ್ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಆರೋಪಿ ಬಾಲ್ಕನಿಯಲ್ಲಿ ತಗ್ಲಾಕ್ಕೊಂಡ ಘಟನೆ ಮಹಾರಾಷ್ಟ್ರದ ಕಾಶಿಮಿರಾದಲ್ಲಿ ನಡೆದಿದೆ.
ಆರೋಪಿಯು ಕಾಶಿಮಿರಾದ ಬಹುಮಹಡಿ ಗೋಪುರದ ಬಾಲ್ಕನಿಯಿಂದ ಜಿಗಿಯುವ ಮೂರ್ಖ ಮತ್ತು ಅಪಾಯಕಾರಿ ಯತ್ನ ನಡೆಸಿದ್ದ. ಆದರೆ ಈ ವೇಳೆ ಆತನ ಯೋಜನೆ ಕೈಕೊಟ್ಟು ಹತ್ತನೇ ಮಹಡಿಯಲ್ಲಿ ನೇತಾಡಿದ ಪ್ರಸಂಗ ನಡೆಯಿತು.
ಪೊಲೀಸರ ಪ್ರಕಾರ, ಸೋಮವಾರ ಮಧ್ಯಾಹ್ನ ಕಾಶಿಮಿರಾದ ಡಿಬಿ ಓಜೋನ್ ಕಾಂಪ್ಲೆಕ್ಸ್ ನಿಂದ ಈ ಘಟನೆ ವರದಿಯಾಗಿದೆ. ಹೈದರಾಬಾದ್ ಮತ್ತು ಕಾಶಿಮಿರಾ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನು ಒಳಗೊಂಡ ಜಂಟಿ ತಂಡವು ಸೋಮವಾರ ಮಧ್ಯಾಹ್ನ ಆರೋಪಿಯನ್ನು ಬಂಧಿಸಲು ತೆರಳಿತ್ತು. ಆರೋಪಿ ಮೊಹಮ್ಮದ್ ಅಬ್ದುಲ್ ಮತೀನ್ (39) ಮನೆಯೊಳಗಿನಿಂದ ಲಾಕ್ ಮಾಡಿಕೊಂಡು ಬಾಲ್ಕನಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಪೊಲೀಸರು ಫ್ಲಾಟ್‌ನ ಬಾಗಿಲು ಒಡೆದು ಒಳ ನುಗ್ಗಿದಾಗ ಬಾಲ್ಕನಿಯಲ್ಲಿ ಸಿಕ್ಕಿಹಾಕಿಕೊಂಡ ಮತೀನ್ ನೇತಾಡುತ್ತಿದ್ದ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿದ ತಂಡ ಆತನನ್ನು ಉಳಿಸುವ ಪ್ರಯತ್ನದಲ್ಲಿ ಒಂದು ವೇಳೆ ಆರೋಪಿ ಕೆಳಗೆ ಬಿದ್ದರೆ ತಕ್ಷಣವೇ ಆತನನ್ನು ರಕ್ಷಿಸುವ ಕ್ರಮವಾಗಿ ನೆಟ್ ಬಳಸಿದರು.
ಅಷ್ಟರಲ್ಲಿ ಪೊಲೀಸ್ ಸಿಬ್ಬಂದಿ ಮತೀನ್ ನನ್ನು ಸುರಕ್ಷಿತವಾಗಿ ಬಾಲ್ಕನಿವರೆಗೆ ಎಳೆದು ತಂದರು. “ಹೈದರಾಬಾದ್‌ನಲ್ಲಿ ನಾರ್ಕೋಟಿಕ್ಸ್ ಡ್ರಗ್ ಮತ್ತು ಸೈಕೋಟ್ರೋಪಿಕ್ (ಎನ್‌ಡಿಪಿಎಸ್) ನಲ್ಲಿ ಪ್ರಕರಣ ದಾಖಲಿಸಿದ ನಂತರ ಮತೀನ್ ಕಳೆದ ಏಳು ತಿಂಗಳಿಂದ ತಲೆಮರೆಸಿಕೊಂಡಿದ್ದ. ಈತ ಕಾಶಿಮಿರಾದಲ್ಲಿ ಇರುವ ಬಗ್ಗೆ ಸುಳಿವು ಪಡೆದ ಹೈದರಾಬಾದ್ ಪೊಲೀಸರು ಅವರ ಸಹಾಯವನ್ನು ಕೋರಿದ್ದರು. ಕಳೆದ ಏಳು ತಿಂಗಳಿನಿಂದ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದ ಆರೋಪಿಯನ್ನು ಕೊನೆಗೂ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದರು.
ಮತೀನ್ ನನ್ನು ಬಂಧಿಸಲಾಗಿದ್ದು, ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಆತನನ್ನು ಹೈದರಾಬಾದ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಹೈದರಾಬಾದ್‌ನ ದಕ್ಷಿಣ ವಲಯದ ರೈನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮತೀನ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.